ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಬೀದಿಗಿಳಿದಿರುವ ರೈತ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಎರಡು ತಿಂಗಳುಗಳಿಂದ ರೈತರು ಸರಣಿ ಹೋರಾಟಗಳನ್ನು ನಡೆಸುತ್ತಿದ್ದು ಫೆಬ್ರವರಿ 18ರಂದು ರಾಷ್ಟ್ರವ್ಯಾಪಿ ರೈಲು ತಡೆ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ವಿವಿಧ ರೈತ ಸಂಘಟನೆಗಳ ನಾಯಕರನ್ನೊಳಗೊಂಡ ಸಂಯುಕ್ತಾ ಕಿಸಾನ್ ಮೋರ್ಚಾದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಪಂಜಾಬ್‌ನ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ಡಾ.ದರ್ಶನ್ ಪಾಲ್, ಮುಂದಿನ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುವುದೆಂದು ತಿಳಿಸಿದರು. ಫೆಬ್ರವರಿ 18ರಂದು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ದೇಶಾದ್ಯಂತ ರೈಲುತಡೆ ಚಳವಳಿಗೆ ಕರೆ ನೀಡಿರುವ ಅವರು, ಫೆಬ್ರವರಿ 12ರಿಂದ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಟೋಲ್-ಫ್ರೀ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ಇದೇ ವೇಳೆ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರ ನೆನಪಿಗಾಗಿ ಫೆಬ್ರವರಿ 14ರಂದು ಕ್ಯಾಂಡಲ್ ಮಾರ್ಚ್ ನಡೆಸಲಾಗುವುದು. ಫೆಬ್ರವರಿ 16ರಂದು ಸರ್ ಛೋಟು ರಾಮ್ ಜನ್ಮ ದಿನಾಚರಣೆ ಮೂಲಕ ವಿವಿಧ ರೀತಿಯಲ್ಲಿ ಹೋರಾಟ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.