ಬೆಂಗಳೂರು: ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಐತಿಹಾಸಿಕ ಕೆಂಪುಕೋಟೆಗೆ ಲಗ್ಗೆ ಹಾಕಿ ದಾಂಧಲೆ ನಡೆಸಿರುವ ಘಟನೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.
ಜನವರಿ 26 ನಮ್ಮೆಲ್ಲ ದೇಶವಾಸಿಗಳಿಗೆ ಅತ್ಯಂತ ಪವಿತ್ರವಾದ ದಿನ. ನಾವೆಲ್ಲರೂ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯಾಗಿರುವ ಪವಿತ್ರವಾದ ಸಂವಿಧಾನವನ್ನು ಅಳವಡಿಸಿಕೊಂಡಿರುವ ದಿನ. ಇದೊಂದು ರಾಷ್ಟ್ರೀಯ ಉತ್ಸವ. ನಾವೆಲ್ಲರೂ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅತ್ಯಂತ ಸಂಭ್ರಮದಿಂದ ಭಾಗವಹಿಸುತ್ತ, ಸಂವಿಧಾನವನ್ನು ಗೌರವಿಸಿ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಬೇಕಾದ ದಿನ. ಈ ಪವಿತ್ರ ದಿನದಂದು ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಸಂವಿಧಾನದ ಆಶಯವನ್ನು ಅಗೌರವಿಸಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜವನ್ನು ಗೌರವಿಸುವ ಪವಿತ್ರ ನೆಲೆಯಾದ ದೆಹಲಿಯ ಐತಿಹಾಸಕ ಕೆಂಪುಕೋಟೆಯಲ್ಲಿ ಗೂಂಡಾಗಿರಿ ಪ್ರದರ್ಶನ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ದೇಶವಿರೋಧಿ ಶಕ್ತಿಗಳಾದ ಖಲಿಸ್ತಾನ್ ಧ್ವಜವನ್ನು ಹಾರಿಸಿರುವುದು ಅಕ್ಷಮ್ಯ ಅಪರಾಧ. ಭಾರತೀಯ ಜನತಾ ಪಾರ್ಟಿ ಈ ಗೂಂಡಾಗಿರಿ ಪ್ರವೃತ್ತಿಯನ್ನು, ವ್ಯವಸ್ಥೆಯ ಮೇಲೆ ಮಾಡಿರುವ ಹಲ್ಲೆಯನ್ನು, ಪೊಲೀಸರ ಮೇಲೆ ನಡೆಸಿರುವ ದೌರ್ಜನ್ಯವನ್ನು ಹಾಗೂ ಸಂವಿಧಾನವನ್ನು ಧಿಕ್ಕರಿಸುವ ದೇಶವಿರೋಧಿ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ರೈತರ ಹೆಸರಿನಲ್ಲಿ ರೈತರ ಪರವಾಗಿರುವ ಮಸೂದೆಗಳನ್ನು ಪ್ರತಿಭಟಿಸುತ್ತಿರುವ ನೆಪದಲ್ಲಿ ಒಂಬತ್ತು ಸುತ್ತಿನ ಮಾತುಕತೆಯ ನಂತರವೂ ತಮ್ಮ ಪಟ್ಟನ್ನು ಬಿಡದೆ ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿ ಕಾಂಗ್ರೆಸ್ ಪಕ್ಷ, ಕಮ್ಯೂನಿಸ್ಟ್ ಪಕ್ಷ, ರೈತ ವಿರೋಧಿ ದಲ್ಲಾಳಿಗಳು, ಖಲಿಸ್ತಾನ್ ಮತ್ತು ಟುಕಡೇ ಟುಕಡೇ ಗ್ಯಾಂಗ್‍ನಂಥ ರಾಷ್ಟ್ರವಿರೋಧಿ ಶಕ್ತಿಗಳು ಸಂಘಟಿತರಾಗಿ ನಡೆಸುತ್ತಿರುವ ಹೋರಾಟ ಅತ್ಯಂತ ಖಂಡನೀಯ ಮತ್ತು ಅನವಶ್ಯಕ ಎಂದು ಅವರು ಹೇಳಿದ್ದಾರೆ.
ಭಾರತೀಯ ಜನತಾ ಪಾರ್ಟಿ ಯಾವತ್ತೂ ರೈತರ ಪರವಾಗಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಮತ್ತು ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ರೈತರಿಗೆ ನ್ಯಾಯ ಒದಗಿಸುವಲ್ಲಿ ತನ್ನನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಈ ಮಸೂದೆಗಳನ್ನು ತಂದಿರುವುದನ್ನು ದೇಶ ಒಪ್ಪಿಕೊಂಡಿದೆ ಎಂದು ಕಟೀಲ್ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುಂದಾಗಿದ್ದ ಪೊಲೀಸರು ಅತ್ಯಂತ ಸಂಯಮದಿಂದ ವರ್ತಿಸಿದ್ದು, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲೆಸೆತ, ಮಾರಕಾಯುಧ ಪ್ರಯೋಗ ಮಾಡಿರುವುದು ಹಾಗೂ ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿರುವುದು ಗೂಂಡಾ ಪ್ರವೃತ್ತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ದೆಹಲಿ ಘಟನೆಯನ್ನು ಖಂಡಿಸಿದ್ದಾರೆ.