ನವದೆಹಲಿ: ದೆಹಲಿಯ ಕೆಂಪುಕೋಟೆ ಪ್ರದೇಶದಲ್ಲಿ ನವೆಂಬರ್ 10ರಂದು ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹತ್ವದ ತಿರುವು ದೊರೆತಿದ್ದು, ದಾಳಿಗೆ ಬಳಸಲಾದ ಕಾಶ್ಮೀರಿ ಕಾರಿನ ಮಾಲೀಕ ಅಮೀರ್ ರಶೀದ್ ಅಲಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪ್ರಕರಣವನ್ನು ದೆಹಲಿ ಪೊಲೀಸರಿಂದ ವಹಿಸಿಕೊಂಡ ನಂತರ, ಎನ್‌ಐಎ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿ ಅಮೀರ್ ರಶೀದ್ ಅಲಿಯನ್ನು ದೆಹಲಿಯಲ್ಲೇ ಬಂಧಿಸಿದೆ. ಜಮ್ಮು–ಕಾಶ್ಮೀರದ ಪ್ಯಾಂಪೋರ್ ತಾಲ್ಲೂಕಿನ ಸಂಬೂರ್ ಪ್ರದೇಶದ ನಿವಾಸಿಯಾದ ಅಮೀರ್, ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿ ಜೊತೆ ಸೇರಿ ದಾಳಿಯ ಸಂಚು ರೂಪಿಸಿದ್ದಾನೆ ಎಂದು ಎನ್‌ಐಎ ತನಿಖೆಯಲ್ಲಿ ಹೊರಬಂದಿದೆ.
ಅಮೀರ್ ಈ ಕಾರನ್ನು ಖರೀದಿಸಲು ದೆಹಲಿಗೆ ಬಂದು, ಬಳಿಕ ಅದೇ ಕಾರನ್ನು ಐಇಡಿ ಸ್ಫೋಟಕ ಸಾಧನವನ್ನು ಅಳವಡಿಸಿ ರಾಷ್ಟ್ರೀಯ ರಾಜಧಾನಿಯನ್ನು ಬೆಚ್ಚಿಬೀಳಿಸಿದ ದಾಳಿಗೆ ಬಳಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ ಚಾಲಕರಾಗಿ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಉಮರ್ ಉನ್ ನಬಿಯೇ ಎಂದು ಎನ್‌ಐಎ ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ದೃಢಪಡಿಸಿದೆ. ಪುಲ್ವಾಮಾ ಮೂಲದ ನಬಿ, ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರೆಂಬುದೂ ತನಿಖೆಯಲ್ಲಿ ತಿಳಿದು ಬಂದಿದೆ.
ನಬಿಗೆ ಸೇರಿದ ಮತ್ತೊಂದು ವಾಹನವನ್ನು ಸಹ ಎನ್‌ಐಎ ವಶಪಡಿಸಿಕೊಂಡಿದೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಸೇರಿಸಿ ಇದುವರೆಗೂ 73 ಮಂದಿ ಸಾಕ್ಷಿಗಳನ್ನು ಸಂಸ್ಥೆ ವಿಚಾರಣೆ ನಡೆಸಿದ್ದು, ವಶಪಡಿಸಿಕೊಂಡ ವಾಹನದಲ್ಲಿ ಮಹತ್ವದ ಸುಳಿವುಗಳನ್ನು ಹುಡುಕಲಾಗುತ್ತಿದೆ.
ಎನ್‌ಐಎ ದೆಹಲಿ, ಜಮ್ಮು–ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶದ ಪೊಲೀಸ್ ಇಲಾಖೆಗಳ ಜೊತೆಗೆ ವಿವಿಧ ತನಿಖಾ ಸಂಸ್ಥೆಗಳ ಸಹಕಾರದಲ್ಲಿ ವಿಸ್ತೃತ ಪರಿಶೀಲನೆ ಮುಂದುವರಿಸಿದ್ದು, ಸ್ಫೋಟದ ಹಿಂದೆ ಇರುವ ದೊಡ್ಡ ಮಟ್ಟದ ಪಿತೂರಿಯನ್ನು ಬಯಲಿಗೆಳೆಯಲು ಮತ್ತು ಇತರ ಆರೋಪಿಗಳನ್ನು ಪತ್ತೆಹಚ್ಚಲು ಹಲವು ಸುಳಿವುಗಳನ್ನು ಅನುಸರಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.























































