ಬಾಗಲಕೋಟೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರನ ಕಾರು ಬೈಕ್‌ಗೆ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹುನಗುಂದ ಸಮೀಪ ನಡೆದಿದೆ. ಈ ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಾಗ, ಇದು ಡಿಸಿಎಂ ಮಗನ ಕಾರು ಎಂದು ಕೆಲವರು ಧಮ್ಕಿ ಹಾಕಿದ್ದಾರೆಂಬ ಆರೋಪವೂ ಕೇಳಿಬಂದಿದೆ. ಆದರೆ ಘಟನೆ ವೇಳೆ ತಾನು ಸ್ಥಳದಲ್ಲೇ ಇರಲಿಲ್ಲ ಎಂದು ಡಿಸಿಎಂ ಪುತ್ರ ಚಿದಾನಂದ ಸವದಿ ಸ್ಪಷ್ಟಪಡಿಸಿದ್ದಾರೆ.
ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಹಾಗೂ ಸ್ನೇಹಿತರು, ಸೋಮವಾತ 2 ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರೆನ್ನಲಾಗಿದೆ. ಸಂಜೆ ವಿಜಯಪುರ ಮಾರ್ಗವಾಗಿ ಚಿದಾನಂದ್ ಟೀಂ ಪ್ರಯಾಣಿಸುತ್ತಿದ್ದ ಕಾರು (ಕೆಎ22 ಎಂಸಿ5151) ಹುನಗುಂದ ಸಮೀಪ, ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೈಕ್‌ಗೆ ಡಿಕ್ಕಿಯಾಗಿದೆ. ಬೈಕ್ ಸವಾರ ಬಾಗಲಕೋಟೆ ಬಾಗಲಕೋಟೆ ಸಮೀಪದ ಚಿಕ್ಕಹಂಡರಗಲ್ ನಿವಾಸಿ ಕೂಡಲೆಪ್ಪ ಬೋಳಿ (58) ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, ತಲೆಗೆ ಗಂಭೀರ ಏಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ, ಕೂಡಲೆಪ್ಪ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ನಡುವೆ, ಅಪಘಾತ ನಡೆದ ಸ್ಥಳದಲ್ಲಿ ಡಿಸಿಎಂ ಪುತ್ರನ ಕಡೆಯವರು ಪುಂಡಾಟ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಪಘಾತ ನಡೆದ ಸಂದರ್ಭದಲ್ಲಿ ಸ್ಥಳೀಯರು ರೊಚ್ಚಿಗೆದ್ದರೆನ್ನಲಾಗಿದೆ. ಆ ವೇಳೆ ಇದು ಡಿಸಿಎಂ ಲಕ್ಷ್ಮಣ್ ಸವದಿ ಪುತ್ರನ ಕಡೆಯವರ ಕಾರು ಎಂದು ತಿಳಿಯಬಾರದೆಂಬ ಕಾರಣಕ್ಕಾಗಿ ಕಾರಿನಲ್ಲಿದ್ದವರು ನಂಬರ್ ಪ್ಲೇಟ್ ತೆಗೆದು ಹಾಕಿದರೆನ್ನಲಾಗಿದೆ. ಇದನ್ನು ಚಿತ್ರೀಕರಿಸುತ್ತುದ್ದವರಿಗೆ ಆವಾಜ್ ಹಾಕಿದರೆಂಬ ಆರೋಪವೂ ಕೇಳಿಬಂದಿದೆ. ಅಷ್ಟೇ ಅಲ್ಲ, ಇದು ಡಿಸಿಎಂ ಮಗನ ಕಾರು ಎನ್ನುತ್ತಲೇ ಸ್ಥಳೀಯರ ಮೊಬೈಲ್‌ನಲ್ಲಿದ್ದ ದೃಶ್ಯಗಳನ್ನು ಬಲವಂತವಾಗಿ ಅಳಿಸಿಹಾಕಿ ದೌರ್ಜನ್ಯ ಪ್ರದರ್ಶಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈ ನಡುವೆ, ಚಿದಾಬಂದ್ ಸವದಿ ಅವರ ಸಮ್ಮುಖದಲ್ಲೇ ಈ ಸನ್ನಿವೇಶ ನಡೆದಿದೆ ಎಂದು ಸ್ಥಳೀಯರು ದೂರಿದ್ದರೆ, ಅಪಘಾತ ಸಂದರ್ಭದಲ್ಲಿ ತಾನು ಸ್ಥಳದಲ್ಲೇ ಇರಲಿಲ್ಲ ಎಂದು ಚಿದಾನಂದ್ ಸವದಿ ಸ್ಪಷ್ಟಪಡಿಸಿದ್ದಾರೆ.