ಬೆಂಗಳೂರು: ಕಲಬುರ್ಗಿಯ ಗೆಲುವು ಕರ್ನಾಟಕದ ಬಿಜೆಪಿ ಜಯಭೇರಿಯ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪದ ಮಹಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ವಿಜಯೋತ್ಸವದ ರ್ಯಾಲಿ ಸೇರಿದಂತೆ ಕಾಣುತ್ತಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರ ನೆಲದಲ್ಲಿ ಮೇಯರ್, ಉಪ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪದ ಶುಭ ಸಂಕೇತ ಎಂದ ಅವರು, ಮೋದಿ ಬಂದಿದ್ದರು. ಏನೋ ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪಿಸಬಹುದು ಎಂದು ತಿಳಿಸಿದರು.
ಯಾತ್ರೆಗೆ ಹೋಗಿ ಬಂದವರ ದರ್ಶನದಿಂದ ಪುಣ್ಯ ಲಭಿಸುತ್ತದೆ. ನನಗೂ ಪುಣ್ಯ ಲಭಿಸಿದೆ. ಯಾತ್ರೆಯ ಸಾಫಲ್ಯಕ್ಕಾಗಿ ಅಭಿನಂದನೆಗಳು ಎಂದ ಅವರು, ಯಾತ್ರೆಗಳ ಮೂಲಕ ಜನವಿಶ್ವಾಸ, ಸಮರ್ಥನೆ ಲಭಿಸಿದೆ. ಅದು ಅಭೂತಪೂರ್ವ, ಅದ್ಭುತ ಎಂದು ತಿಳಿಸಿದರು.
Gratitude for the warm welcome. Only BJP can ensure all-round development of Karnataka. Watch from Davanagere. https://t.co/VJvgbmqD6k
— Narendra Modi (@narendramodi) March 25, 2023
ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಯಾತ್ರೆಯ ಜನಸಮರ್ಥನೆಯನ್ನು ಉಳಿಸಿಕೊಳ್ಳಬೇಕು. ಪ್ರತಿ ಬೂತ್‍ಗೆ ತೆರಳಿ ನಮ್ಮ ಉತ್ಸಾಹದಿಂದ ಕೆಲಸ ಮಾಡಬೇಕು. ಪ್ರತಿ ಬೂತ್ ಗೆಲ್ಲುವ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕರ್ತರಿಗೆ ಏಟು ಕೊಡುವ ಮಾಜಿ ಮುಖ್ಯಮಂತ್ರಿ ಜನರನ್ನು ಗೌರವಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ. ಇಲ್ಲಿನ ಕಾರ್ಯಕರ್ತರು ನನ್ನ ಅತ್ಯಂತ ಆತ್ಮೀಯ ಮಿತ್ರ, ಸಹೋದರನಂತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ವೈಟ್‍ಫೀಲ್ಡ್ ಮೆಟ್ರೊ ಲೈನ್ ಉದ್ಘಾಟನೆ ಮಾಡಿದ್ದೇನೆ. ತುಮಕೂರಿನಲ್ಲಿ ಎಚ್‍ಎಎಲ್ ಫ್ಯಾಕ್ಟರಿ ಉದ್ಘಾಟನೆ ಆಗಿದೆ. ಬೆಂಗಳೂರು- ಮೈಸೂರು ಎಕ್ಸ್‍ಪ್ರೆಸ್ ವೇ ಲೋಕಾರ್ಪಣೆ ಆಗಿದೆ. ಧಾರವಾಡ ಐಐಟಿ ಉದ್ಘಾಟನೆ ನೆರವೇರಿಸಲಾಗಿದೆ. ಶಿವಮೊಗ್ಗ ವಿಮಾನನಿಲ್ದಾಣ ಜನಸೇವೆಗೆ ಸಿಕ್ಕಿದೆ. ಡಬಲ್ ಎಂಜಿನ್ ಸರಕಾರದ ಜನಸೇವೆಯನ್ನು ಗಮನಿಸಿ ಬಿಜೆಪಿಯನ್ನು ಬೆಂಬಲಿಸಿ ಎಂದು ತಿಳಿಸಿದರು.
ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ನೀಡಲಾಗಿದೆ. ಡಬಲ್ ಎಂಜಿನ್ ಸರಕಾರ ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ. 2018ರಲ್ಲಿ ಇಲ್ಲಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ಕನಿಷ್ಠ ಜನರ ಹೆಸರು ಕಳಿಸಿತ್ತು. ಈಗ ಸುಮಾರು 60 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗುತ್ತಿದೆ ಎಂದು ತಿಳಿಸಿದರು. ಡಬಲ್ ಎಂಜಿನ್ ಸರಕಾರ ಇದ್ದರೆ ಡಬಲ್ ಫಾಯಿದಾ ಸಿಗುತ್ತದೆ ಎಂದರು.
ದಲಿತರು, ಆದಿವಾಸಿಗರು, ಮಹಿಳೆಯರು, ಶೋಷಿತರು, ವಂಚಿತರು ಸೇರಿ ಎಲ್ಲರ ಅಭಿವೃದ್ಧಿ ನಮ್ಮ ಸಂಕಲ್ಪ ಎಂದ ಅವರು, ಸ್ವಾರ್ಥಿ ಸಮ್ಮಿಶ್ರ ಸರಕಾರವನ್ನು ಕರ್ನಾಟಕದ ಜನತೆ ನೋಡಿದ್ದಾರೆ. ಅಂಥ ಸರಕಾರದಿಂದ ನಷ್ಟವಾಗಿದೆ. ಕರ್ನಾಟಕಕ್ಕೆ ಬಿಜೆಪಿಯ ಪೂರ್ಣ ಬಹುಮತದ ಸ್ಥಿರ ಸರಕಾರ ಬೇಕಿದೆ ಎಂದರು. ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಯ ಪೂರ್ಣ ಬಹುಮತದ ಸ್ಥಿರ ಸರಕಾರವನ್ನು ಕೊಡಿ ಎಂದು ವಿನಂತಿಸಿದರು.
ಕರ್ನಾಟಕವನ್ನು ಕಾಂಗ್ರೆಸ್ಸಿಗರು ನೇತಾರರ ಎಟಿಎಂ ಮಾಡಲು ಬಯಸುತ್ತಾರೆ. ಕಾಂಗ್ರೆಸ್ ಪಕ್ಷದವರು ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿ ನೀಡಿದ್ದರು. ಜನರನ್ನು ಭ್ರಮಿತರನ್ನಾಗಿ ಮಾಡಿದ್ದರು. ಆದರೆ, ಅವೆಲ್ಲವನ್ನೂ ಮರೆತಿದ್ದಾರೆ ಎಂದು ಆಕ್ಷೇಪಿಸಿದರು. ಸುಳ್ಳು ಹೇಳುವ ಕಾಂಗ್ರೆಸ್‍ನವರನ್ನು ಸೋಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ಸಿಗರಲ್ಲಿ ಧನಾತ್ಮಕ ಕಾರ್ಯಸೂಚಿ ಇಲ್ಲ. ಅವರು ಮೋದಿಯವರ ಸಾವಿನ ಕನಸು ಕಾಣುತ್ತಾರೆ. ಆದರೆ, ಕರ್ನಾಟಕದ ಜನತೆ ಮೋದಿಯವರ ಕಮಲ ಅರಳಿಸುವ ಕನಸು ಕಾಣುತ್ತಿರುವುದು ಅವರಿಗೆ ತಿಳಿದಿಲ್ಲ ಎಂದು ತಿಳಿಸಿದರು. ಕಮಲ ಸಮೃದ್ಧಿ, ಅಭಿವೃದ್ಧಿಯ, ಮುಂದಡಿಯಿಡುವ ಸಂಕೇತ. ವಿಶ್ವ ಇಂದು ಭಾರತದ ಕಡೆ ನೋಡುತ್ತಿದೆ. ಭಾರತವು ಕರ್ನಾಟಕದತ್ತ ನೋಡುತ್ತಿದೆ ಎಂದು ತಿಳಿಸಿದರು.
ವಿದೇಶಿ ಹೂಡಿಕೆಯಲ್ಲಿ ಕರ್ನಾಟಕ ಅತ್ಯಂತ ಮುಂದಿದೆ. ಇದಕ್ಕಾಗಿ ಅಭಿನಂದನೆಗಳು ಎಂದು ತಿಳಿಸಿದರು. 7 ಮೆಗಾ ಟೆಕ್ಸ್‍ಟೈಲ್ ಪಾರ್ಕ್ ದೇಶದಲ್ಲಿ ನಿರ್ಮಾಣವಾಗಲಿದ್ದು, ರಾಜ್ಯದಲ್ಲಿ ಒಂದು ಟೆಕ್ಸ್‍ಟೈಲ್ ಪಾರ್ಕ್ ನಿರ್ಮಾಣವಾಗುತ್ತಿದೆ. ಕರ್ನಾಟಕದ ಮೂಲಸೌಕರ್ಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಆಗುತ್ತಿದೆ. ಸಂಸ್ಕøತಿ ಮತ್ತು ತಂತ್ರಜ್ಞಾನದ ಜೊತೆ ಸೇರಿಸಿ ಯುವಜನರಿಗೆ ಹೆಚ್ಚಿನ ಅವಕಾಶ ಸಿಗಲು ಬಿಜೆಪಿ ಸರಕಾರ ಅನಿವಾರ್ಯ. ಈ ಸಂದೇಶವನ್ನು ಪ್ರತಿ ಬೂತ್‍ಗೆ ತಲುಪಿಸಬೇಕು ಎಂದರು.
ಏಪ್ರಿಲ್‍ನಲ್ಲಿ ಮತ್ತೆ ಕರ್ನಾಟಕಕ್ಕೆ ಬರಲಿದ್ದೇನೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಪ್ರಕಟಿಸಿದ ಅವರು, ಇಲ್ಲಿನ ಜನರ ಪ್ರೀತಿ, ಅಭಿಮಾನಕ್ಕೆ ಚಿರಋಣಿ ಎಂದು ತಿಳಿಸಿದರು.
ದಾವಣಗೆರೆಗೆ ಬಂದಾಗಲೆಲ್ಲ ನಿಮ್ಮ ಆಶೀರ್ವಾದ ಇಮ್ಮಡಿಯಾಗುತ್ತದೆ. ನಿಮ್ಮೆಲ್ಲರ ದರ್ಶನ ನನಗೆ ಸಂತಸ ತಂದಿದೆ ಎಂದರು. ‘ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಇದಕ್ಕೂ ಮೊದಲು ಕಾರ್ಯಕರ್ತರ ನಡುವೆ ರೋಡ್ ಷೋದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿದ್ದರು. ಅಲ್ಲದೆ ಪುಷ್ಪವೃಷ್ಟಿ ಮೂಲಕ ಸಂತಸ ವ್ಯಕ್ತಪಡಿಸಿ ಪ್ರಧಾನಿಯವರಿಗೆ ಭವ್ಯ ಸ್ವಾಗತ ಕೋರಿದರು.
400 ಎಕರೆ ಜಾಗದಲ್ಲಿ ಪೆಂಡಾಲ್ ಹಾಕಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. 10 ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಪೂರ್ಣ ದಾವಣಗೆರೆ ನಗರ ಕೇಸರಿಮಯವಾಗಿತ್ತು.