ಬೆಂಗಳೂರು: ಸುಳ್ಳು, ಮೋಸ ಕಾಂಗ್ರೆಸ್ ನೀತಿ. ಅದನ್ನೇ ತನ್ನ ರಾಜಕೀಯ ತಂತ್ರಗಾರಿಕೆಯಾಗಿ ಕಾಂಗ್ರೆಸ್ಸಿಗರು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ
ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಂಬ್ ಇಡುವವರ ಜೊತೆಗೂಡಿ ಅಧಿಕಾರ ಪಡೆಯುವುದು ಕಾಂಗ್ರೆಸ್ ತತ್ವ. ಆದರೆ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ನಮ್ಮ ಪಕ್ಷದ್ದು. ಮೀಸಲಾತಿಯ ಬಹುವರ್ಷಗಳ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ನೀತಿ. ಆದರೆ, ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಬೇಕೆಂಬ ಸಂಚು ರೂಪಿಸಿದವರ ಜೊತೆ ಕೈಜೋಡಿಸಿದವರು ಕಾಂಗ್ರೆಸ್ಸಿಗರು ಎಂದರು.
ಇದರ ಪರಿಣಾಮವಾಗಿ ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಬಿತ್ತು. ಡಿಕೆಶಿ ಬ್ರದರ್ಸ್ ಕುಕ್ಕರ್ ಬಾಂಬ್ ಸ್ಫೋಟದ ಸಂಚನ್ನು ಸಮರ್ಥಿಸಿದರು. ಕಾಂಗ್ರೆಸ್ ಓಲೈಕೆ ರಾಜಕೀಯ ನೀತಿ ಇದಕ್ಕೆಲ್ಲ ಕಾರಣ. ಬಿಜೆಪಿ ದೇಶ ವಿರೋಧಿಗಳಿಗೆ ಬಿರಿಯಾನಿ ನೀಡುವ ಪಾರ್ಟಿ ಅಲ್ಲ. ಬಾಂಬ್ ಇಡುವವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವುದು ನಮ್ಮ ನೀತಿ ಎಂದು ತಿಳಿಸಿದರು.
ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ, ಜನ್‍ಧನ್ ಅಕೌಂಟ್ ಸೇರಿ ಎಲ್ಲ ಯೋಜನೆಗಳನ್ನು ಜಾತಿ, ಧರ್ಮವನ್ನು ನೋಡದೆ ನೀಡಿದ್ದು ಬಿಜೆಪಿ. ಆದರೂ ನಮ್ಮಲ್ಲಿ ಕೋಮುವಾದವನ್ನು ಕಾಂಗ್ರೆಸ್‍ನವರು ಹುಡುಕುತ್ತಾರೆ ಎಂದು ಆಕ್ಷೇಪಿಸಿದರು.
ಅರ್ಕಾವತಿ ರೀಡೂ ಮೂಲಕ 8 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್ ಮುಖಂಡರು ಎಂದು ಟೀಕಿಸಿದರು. ಏನಾದರೂ ಮಾಡಿ ಅಧಿಕಾರ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಕಟ್ಟಿಟ್ಟ ಬುತ್ತಿ. ಕೇಂದ್ರ, ರಾಜ್ಯ ಸರಕಾರಗಳ ಅಭಿವೃದ್ಧಿಯನ್ನು ಗಮನಿಸಿದ ಜನತೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ಸಂದರ್ಭದಲ್ಲಿ 130 ಕೋಟಿ ಜನರ ಪ್ರಾಣ ಉಳಿಸಿದವರು ನರೇಂದ್ರ ಮೋದಿಜಿ ಅವರು ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ. ಅವರ ಸುಳ್ಳು, ಪ್ರಜಾತಂತ್ರಕ್ಕೆ ಮಾಡಿದ ಅವಮಾನಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಮನವಿ ಮಾಡಿದರು.
ಗಾಂಧಿ ಹೆಸರು ಇಟ್ಟುಕೊಂಡು ಅವರ ತತ್ವ ಮರೆತರು. ಅಂಬೇಡ್ಕರ್ ಹೆಸರು ಹೇಳಿ ಮೋಸ ಮಾಡಿದರು. ಬಾಬಾಸಾಹೇಬರ ಮಾತಿನಂತೆ ಮೀಸಲಾತಿಯನ್ನು ನಾವು ನೀಡಿದ್ದೇವೆ ಎಂದು ವಿವರಿಸಿದರು. ಚೀನಾ, ಪಾಕಿಸ್ತಾನದಂಥ ದೇಶಗಳು ಮೋದಿಜಿ ಆಡಳಿತ ಮೆಚ್ಚಿ ಅವರಂಥ ನಾಯಕ ಬೇಕೆಂದು ಕೇಳುತ್ತಿದ್ದಾರೆ ಎಂದು ತಿಳಿಸಿದರು. ಭ್ರಷ್ಟಾಚಾರ, ಸುಳ್ಳುಕೋರ ಕಾಂಗ್ರೆಸ್ ಪಕ್ಷ ಸೋಲಿಸಿ; ಬಿಜೆಪಿಗೆ ಆಶೀರ್ವಾದ ಮಾಡಿ ಎಂದರು.
ಬಿಜೆಪಿಗೆ 150 ಸ್ಥಾನ ಗೆಲ್ಲಿಸುವ ಮತ್ತು ಅಧಿಕಾರ ಕೊಡುವ ಪ್ರತಿಜ್ಞೆ ನಿಮ್ಮದಾಗಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮನವಿ ಮಾಡಿದರು. ಕಾಂಗ್ರೆಸ್ ಗ್ಯಾರಂಟಿಗಳು ಸುಳ್ಳು ಭರವಸೆಯಷ್ಟೇ; ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗ್ಯಾರಂಟಿ ಎಂದು ತಿಳಿಸಿದರು.