ಸ್ಮರಣಶಕ್ತಿ ಕುಗ್ಗುತ್ತಿರುವುದೇ ಅಥವಾ ಒತ್ತಡ ಹೆಚ್ಚಿದೆಯೇ? ಹಾಗಾದರೆ, ಸ್ವಲ್ಪ ಡಾರ್ಕ್ ಚಾಕೊಲೇಟ್ ಅಥವಾ ಕೆಲವು ಬೆರ್ರಿ ಹಣ್ಣುಗಳನ್ನು ಸೇವಿಸಿ ನೋಡಿ. ಇತ್ತೀಚಿನ ಪ್ರಾಣಿ ಅಧ್ಯಯನದ ಪ್ರಕಾರ, ಇವುಗಳಲ್ಲಿ ಇರುವ ವಿಶೇಷ ರಾಸಾಯನಿಕಗಳು ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸಿ, ಸ್ಮರಣಶಕ್ತಿಯನ್ನು ಹೆಚ್ಚಿಸುವುದಲ್ಲದೆ ಒತ್ತಡವನ್ನು ಸಹ ಕಡಿಮೆ ಮಾಡುತ್ತವೆ.
ಜಪಾನ್‌ನ ಶಿಬೌರಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳ ಅಧ್ಯಯನವು ಕೋಕೋ ಹಾಗೂ ಬೆರ್ರಿ ಹಣ್ಣುಗಳಲ್ಲಿ ದೊರೆಯುವ ಫ್ಲಾವನಾಲ್‌ಗಳು ಎಂಬ ಸಂಯೋಗಗಳು ಸ್ಮರಣಶಕ್ತಿ ಮತ್ತು ಅರಿವನ್ನು ಸುಧಾರಿಸುತ್ತವೆ ಎಂದು ತೋರಿಸಿದೆ.
‘ಕರಂಟ್ ರಿಸರ್ಚ್ ಇನ್ ಫುಡ್ ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಈ ಅಧ್ಯಯನ ಪ್ರಕಾರ, ಫ್ಲಾವನಾಲ್‌ಗಳ ಸೇವನೆಯು ವ್ಯಾಯಾಮದಂತೆಯೇ ಶಾರೀರಿಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ — ಕೇಂದ್ರ ನರಮಂಡಲವನ್ನು ಸಕ್ರಿಯಗೊಳಿಸಿ ಗಮನ, ಪ್ರೇರಣೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ. ಇವು ನರಕೋಶಗಳನ್ನು ಹಾನಿಯಿಂದ ಕೂಡ ರಕ್ಷಿಸುತ್ತವೆ.
“ಫ್ಲಾವನಾಲ್ ಸೇವನೆಯಿಂದ ಉಂಟಾಗುವ ಒತ್ತಡ ಪ್ರತಿಕ್ರಿಯೆಗಳು ದೈಹಿಕ ವ್ಯಾಯಾಮದಿಂದ ಉಂಟಾಗುವ ಪ್ರತಿಕ್ರಿಯೆಗಳಿಗೆ ಹೋಲುತ್ತವೆ. ಹೀಗಾಗಿ, ನಿಯಮಿತ ಹಾಗೂ ಮಧ್ಯಮ ಪ್ರಮಾಣದ ಸೇವನೆ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ ಎಂದು ಶಿಬೌರಾ ಸಂಸ್ಥೆಯ ಡಾ. ಯಸುಯುಕಿ ಫುಜಿ ಹೇಳಿದ್ದಾರೆ:
ವಿಜ್ಞಾನಿಗಳು ಫ್ಲಾವನಾಲ್‌ಗಳು ಮೆದುಳಿಗೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರಿಯಲು ಇಲಿಗಳ ಮೇಲೆ ಪ್ರಯೋಗ ನಡೆಸಿದರು. ಫ್ಲಾವನಾಲ್‌ಗಳ ರುಚಿಯಿಂದ ಬರುವ ಸ್ವಲ್ಪ ಕಹಿ, ಒಣ, ಸುಕ್ಕುಗಟ್ಟುವ ಅನುಭವವೇ ಮೆದುಳಿಗೆ ನೇರ ಸಂವೇದನೆ ನೀಡಬಹುದು ಎಂಬ ಕಲ್ಪನೆಯನ್ನು ಪರೀಕ್ಷಿಸಲಾಯಿತು. 10 ವಾರದ ವಯಸ್ಸಿನ ಇಲಿಗಳಿಗೆ 25 ಮಿಗ್ರಾಂ/ಕೆಜಿ ಮತ್ತು 50 ಮಿಗ್ರಾಂ/ಕೆಜಿ ಪ್ರಮಾಣದಲ್ಲಿ ಫ್ಲಾವನಾಲ್ ನೀಡಲಾಗಿತ್ತು. ಫಲಿತಾಂಶವಾಗಿ, ಈ ಇಲಿಗಳು ಹೆಚ್ಚು ಚಟುವಟಿಕೆಯಿಂದಿದ್ದು, ಹೆಚ್ಚು ಅನ್ವೇಷಣಾತ್ಮಕ ನಡವಳಿಕೆ ಹಾಗೂ ಉತ್ತಮ ಸ್ಮರಣಾ ಸಾಮರ್ಥ್ಯ ತೋರಿಸಿದವು.
ಫ್ಲಾವನಾಲ್‌ಗಳು ಮೆದುಳಿನ ವಿವಿಧ ಭಾಗಗಳಲ್ಲಿ ಡೋಪಮೈನ್, ನೊರಾಡ್ರೆನಲಿನ್ ಮುಂತಾದ ನರಪ್ರೇಕ್ಷಕ ರಾಸಾಯನಿಕಗಳ ಮಟ್ಟವನ್ನು ಹೆಚ್ಚಿಸಿದವು. ಈ ರಾಸಾಯನಿಕಗಳು ಪ್ರೇರಣೆ, ಗಮನ ಮತ್ತು ಒತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಿವೆ.
ಇದಲ್ಲದೆ, ಫ್ಲಾವನಾಲ್ ಸೇವನೆಯಿಂದ ಒತ್ತಡ ಸಮಯದಲ್ಲಿ ಬಿಡುಗಡೆಯಾಗುವ ಕ್ಯಾಟೆಕೊಲಮೈನ್ ಹಾರ್ಮೋನುಗಳ ಪ್ರಮಾಣವೂ ಹೆಚ್ಚಾಗಿದ್ದುದನ್ನು ಸಂಶೋಧಕರು ಗಮನಿಸಿದರು. ಹೈಪೋಥಾಲಮಸ್‌ನ ಪಿವಿಎನ್ (Paraventricular Nucleus) ಭಾಗದಲ್ಲೂ ಹೆಚ್ಚಿನ ಚಟುವಟಿಕೆ ಕಂಡುಬಂದಿದೆ — ಇದು ಒತ್ತಡ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮೆದುಳಿನ ಪ್ರದೇಶವಾಗಿದೆ.
ಒಟ್ಟಾರೆ, ದಿನನಿತ್ಯದ ಆಹಾರದಲ್ಲಿ ನಿಯಮಿತ ಪ್ರಮಾಣದ ಡಾರ್ಕ್ ಚಾಕೊಲೇಟ್ ಅಥವಾ ಬೆರ್ರಿ ಹಣ್ಣುಗಳನ್ನು ಸೇರಿಸುವುದರಿಂದ ಮನಸ್ಸು ಹೆಚ್ಚು ಚುರುಕಾಗುತ್ತದೆ, ಸ್ಮರಣಶಕ್ತಿ ಬೆಳೆದು ಒತ್ತಡ ತಗ್ಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.


















































