ಬೆಗಳೂರು: ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ಬಳಿ ಅಪ್ರಾಪ್ತೆ ಮೇಲೆ ನಡೆದಿದೆ ಎನ್ನಲಾದ ಗ್ಯಾಂಗ್‌ರೇಪ್ ಪ್ರಕರಣ ಕುರಿತಂತೆ ರಾಜ್ಯ ಮಹಿಳಾ ಆಯೋಗದ ಮಾಹಿತಿ ಪಡೆದಿದೆ.
ಕೃತ್ಯ ಬೆಳಕಿಗೆ ಬರುತ್ತಿದ್ದಂತೆಯೇ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಪ್ರಕರಣ ಕುರಿತಂತೆ ಮಾಹಿತಿ ಪಡೆದರು. ಆರೋಪಿಗಳನ್ನು ಪತ್ತೆ ಮಾಡಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ ಹಾಗೂ ಸಂತ್ರಸ್ತೆಯ ಕುಟುಂಬಕ್ಕೂ ಸೂಕ್ತ ಭದ್ರತೆ ಒದಗಿಸುವಂತೆ ಪ್ರಮೀಳಾ ನಾಯ್ಡು ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ಸಂತ್ರಸ್ತೆ ಬಾಲಕಿಗೆ ಎಲ್ಲಾ ರೀತಿಯ ನೆರವು ನೀಡಬೇಕು, ಹಾಗೂ ಸಂತ್ರಸ್ತೆಯ ಕುಟುಂಬದವರನ್ನೂ ಕೂಡಲೇ ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೂ ಪ್ರಮೀಳಾ ನಾಯ್ಡು ನಿರ್ದೇಶನ ನೀಡಿದ್ದಾರೆ.
ಈ ಕುರಿತಂತೆ ಉದಯ ನ್ಯೂಸ್ ಜೊತೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಬಂಟ್ವಾಳ ಸಮೀಪ ಶುಕ್ರವಾರ 16 ,ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಮ್ಮ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.