ಬೆಂಗಳೂರು: ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕೆ ಆರಂಭಗೊಂಡಿದ್ದು ಭಾರತೀಯ ಜನತಾ ಪಕ್ಷ ಕೂಡಾ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲು ಕಾರ್ಯತಂತ್ರ ರೂಪಿಸುತ್ತಿದೆ.
ಆರೆಸ್ಸೆಸ್ ಕಟ್ಟಾಳು, ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಅವರಿಗೆ ತಮಿಳುನಾಡು ರಾಜಕೀಯ ಶಕ್ತಿವೃದ್ಧಿಯ ನೊಗ ಕೊಟ್ಟಿರುವ ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ಭಾರೀ ನಿರೀಕ್ಷೆ ಹೊಂದಿದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಅಣ್ಣಾಡಿಎಂಕೆ ಜೊತೆ ವಿಷಯಾಧಾರಿತ ಭಿನ್ನಾಭಿಪ್ರಾಯಗಳು ಉಂಟಾಗಿದೆ. ಆದರೆ ಅದ್ಯಾವುದೂ ಪಕ್ಷದ ಸಂಘಟನಾ ಹಾದಿಗೆ ಅಡ್ಡಿಯಾಗದು ಎನ್ನುವುದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿಶ್ವಾಸ.
ಈ ಕುರಿತಂತೆ ಬೆಂಗಳೂರಿನಲ್ಲಿ ಉದಯ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡ ಸಿ.ಟಿ.ರವಿ, ನಾವು ಓಟಿನ ಹಿಂದೆ ಸಾಗುವವರಲ್ಲ, ಬದಲಾಗಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಂಘಟನೆ ಮಾಡುವವರು. ಹಾಗಾಗಿ ನಮ್ಮ ಸಿದ್ದಾಂತವನ್ನು ಮೆಚ್ಚಿ ಯುವಜನರು ಬಿಜೆಪಿಯತ್ತ ಬರುತ್ತಿದ್ದಾರೆ ಎಂದರು.
ತಮಿಳುನಾಡಿನಲ್ಲಿ ಈವರೆಗೂ ವಂಶ ಪಾರಂಪರ್ಯ ರಾಜಕೀಯ ನಡೆಯುತ್ತಲೇ ಬಂದಿರುವುದು. ಜಾತಿ ಆಧಾರದಲ್ಲೇ ಅಲ್ಲಿ ಆಡಳಿತ ನಡೆದಿರುವುದು. ಅಲ್ಲಿನ ಫ್ಯಾಮಿಲಿ ರಾಜಕೀಯದಿಂದ ಜನರಿಗೇನೂ ಅನುಕೂಲವಾಗಿಲ್ಲ ಎಂದು ವಿಶ್ಲೇಷಿಸಿದ ಸಿ.ಟಿ.ರವಿ, ನಾವು ಅಲ್ಲಿನ ಭಾಷೆ, ಸಂಸ್ಕೃತಿ ಗೌರವಿಸುತ್ತೇವೆ. ಎಲ್ಲಾ ಭಾಷೆಗಳನ್ನು ಗೌರವಿಸಿ ದೇಶ ಹಾಗೂ ಭಾಷೆಯನ್ನು ಒಟ್ಟಾಗಿ ಕೊಂಡೊಯ್ಯುತ್ತೇವೆ. ಈ ಕಾರಣದಿಂದಾಗಿಯೇ ಯುವಜನರು ನಮ್ಮ ಪಕ್ಷದತ್ತ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರು.
ನಮ್ಮ ಪಕ್ಷಕ್ಕೆ ಬಂದವರಿಗೆ ಏನನ್ನೂ ನಾವು ಕೊಟ್ಟಿಲ್ಲ. ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ, ಬಹುಭಾಷಾ ತಾರೆ ಖುಷ್ಬೂ ಸೇರಿ ಹಲವರು ನಮ್ಮ ಪಕ್ಷವನ್ನು ಸೇರಿದ್ದಾರಾದರೂ ಅವರಿಗೆ ನಾವು ಯಾವುದೇ ಹುದ್ದೆಯ ಭರವಸೆ ನೀಡಿಲ್ಲ. ಅವರಂತೆಯೇ ಆ ರಾಜ್ಯದ ಹಿರಿಯ ನಾಯಕರು ಬಿಜೆಪಿಗೆ ಬರಲಿದ್ದು ಅನಂತರ ದೊಡ್ಡಮಟ್ಟದ ಬೆಳವಣಿಗೆಯಾಗಲಿದೆ ಎಂದು ಹೇಳುವ ಮೂಲಕ ಸಿ.ಟಿ.ರವಿ ದಕ್ಷಿಣ ಭಾರತದ ರಾಜಕೀಯದಲ್ಲಿ ಭರ್ಜರಿ ವಿದ್ಯಮಾನದ ಸುಳಿವನ್ನು ನೀಡಿದರು.
ನವೆಂಬರ್ 21ರಂದು ಬಿಜೆಪಿಯ ಚಾಣಕ್ಯ, ಕೇಂದ್ರ ಸಚಿವ ಅಮಿತ್ ಶಾ ಅವರು ತಮಿಳುನಾಡಿಗೆ ಭೇಟಿ ನೀಡುವರೆಂಬ ಸುದ್ದಿಯ ಸಂದರ್ಭದಲ್ಲೇ ಸಿ.ಟಿ.ರವಿ ಹೇಳಿಕೆ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಅಷ್ಟೇ ಅಲ್ಲ, ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ ಪಕ್ಷಗಳಲ್ಲಿ ಸಿ.ಟಿ.ರವಿ ಹೇಳಿಕೆ ಸಂಚಲನ ಮೂಡಿಸಿದೆ.