ಬೆಂಗಳೂರು: ಆದ್ಯಾತ್ಮ ಕ್ಷೇತ್ರದಲ್ಲಿ ಮಾರ್ಗದರ್ಶಿಯಾಗಿರುವ ಗ್ರಾಮಾಭಿವೃದ್ದಿ ಹಾಗೂ ಸಮಾಜಮುಖಿ ಕೈಂಕರ್ಯಗಳಲ್ಲೂ ಮುಂಚೂಣಿಯಲ್ಲಿರುವ ನಡೆದಾಡುವ ಮಂಜುನಾಧ ಇದೀಗ ರಾಜ್ಯಸಭಾ ಸದಸ್ಯ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ರಾಜ್ಯಸಭಾ ನಾಮ ನಿರ್ದೇಶನದಿಂದ ಇಡೀ ರಾಜ್ಯಸಭೆಗೆ ಗೌರವ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಣ್ಣಿಸಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವರಿಷ್ಠರ ತೀರ್ಮಾನ ಬಗ್ಗೆ ರವಿ ಹೆಮ್ಮೆ ಪಟ್ಟಿದ್ದಾರೆ.
ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ರಾಜರ್ಷಿ ಡಾ.ಹೆಗ್ಗಡೆ ಅವರನ್ನು ಅಭಿನಂದಿಸಿದ ಸಿ.ಟಿ.ರವಿ, ಆಶೀರ್ವಾದ ಪಡೆದರು. ರಾಜ್ಯಸಭಾ ಸದಸ್ಯರಾಗುವ ನಾಯಕರಿಗೆ ಆ ಸ್ಥಾನವನ್ನು ಆಲಂಕರಿಸಿದ ಬಳಿಕ ಗೌರವ ಹೆಚ್ಚಾಗುವುದು ಸಹಜ. ಆದರೆ ಈಗ ವೀರೇಂದ್ರ ಹೆಗ್ಗಡೆ ಅವರಿಗೆ ರಾಜ್ಯಸಭಾ ಸ್ಥಾನ ನೀಡಿರುವುದರಿಂದ ಇಡೀ ದೇಶಕ್ಕೆ ಗೌರವ ಹೆಚ್ಚಾಗಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ, ಅಭಿನಂದಿಸಿ ಆಶೀರ್ವಾದ ಪಡೆಯಲಾಯಿತು. pic.twitter.com/FfsEHu2Oiv
— C T Ravi 🇮🇳 ಸಿ ಟಿ ರವಿ (@CTRavi_BJP) July 8, 2022
ವಿವಿಧ ಕ್ಷೇತ್ರಗಳಲ್ಲಿ ಅಭ್ಯುದಯಕ್ಕೆ ಕಾರಣರಾಗಿರುವ ವೀರೇಂದ್ರ ಹೆಗ್ಗಡೆಯವರ ಅನುಭವವು ಇಡೀ ದೇಶಕ್ಕೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ರವಿ, ಈ ಬಾರಿಯ ನಾಮರ್ದೇಶನ ವಿಚಾರದಲ್ಲಿ ಕೇಂದ್ರ ಸರ್ಕಾರ ಅತ್ಯುತ್ತಮ ನಿರ್ಧಾರವನ್ನೇ ಕೈಗೊಂಡಿದೆ ಎಂದಿದ್ದಾರೆ.

























































