ಬೆಂಗಳೂರು: ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರು ಕಾರ್ಯಕರ್ತರಿಗೆ ಮದ್ಯ ಹಂಚಿದ್ದಾರೆ ಎನ್ನಲಾದ ಸುದ್ದಿ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದೆಬ್ಬಿಸಿದೆ. ಈ ಸುದ್ದಿಗೆ ಗುದ್ದು ಕೊಟ್ಟಿರುವ ಕಾಂಗ್ರೆಸ್ ಪಕ್ಷ, ಸುಧಾಕರ್ ವಿರುದ್ದವಷ್ಟೇ ಅಲ್ಲ, ಬಿಜೆಪಿ ವರಿಷ್ಠರನ್ನೂ ಈ ವಿವಾದದಲ್ಲಿ ಎಳೆದು ತಂದಿದೆ.
ಸುಧಾಕರ್ ಎಣ್ಣೆ ಪಾರ್ಟಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಉತ್ತರಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಾ.ಸುಧಾಕರ್ ಅವರ ಬೆಂಬಲಿಗರ ನಡೆ ಬಗ್ಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನೆಲಮಂಗಲದಲ್ಲಿನ ಬಿಜೆಪಿ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸುವುದು ಬೇರೆ ವಿಚಾರ. ಆದರೆ ಬಿಜೆಪಿ ಪ್ರಮುಖ ನಾಯಕರು ಇದಕ್ಕೆ ಸ್ಪಷ್ಟನೆ ನೀಡಬೇಕಿದೆ ಎಂದು ಕುಟುಕಿದ್ದಾರೆ. ಬಿಜೆಪಿಯ ಇಂಥ ಸಂಸ್ಕೃತಿ ಬಗ್ಗೆ ರಾಷ್ಟ್ರೀಯ ನಾಯಕರು ಉತ್ತರಿಸಲಿ ಎಂದು ಡಿಕೆಶಿ ಹೇಳಿದರು.
ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ….
ರಾಜ್ಯ ಡೆಂಗಿ ಪೀಡಿತವಾಗಿರುವಾಗ ಬಿಜೆಪಿ ನಾಯಕರು ಮದ್ಯ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ನಾನು ಮಂಗಳೂರಿಗೆ ಭೇಟಿ ಕೊಟ್ಟಾಗ ಈಜು ಕೊಳದಲ್ಲಿ ಈಜಿದ್ದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರು ಈಗೆಲ್ಲಿದ್ದಾರೆ ? ಇದೇನಾ ನಿಮ್ಮ ಸಂಸ್ಕ್ರತಿ ?@DrSudhakar_ @BJP4Karnataka pic.twitter.com/RK67AQhFxx— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 7, 2024
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಾ ಬಿಜೆಪಿ ನಾಯಕರ ಪಾರ್ಟಿ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿಯವರು ಹೇಳೋದು ಒಂದು ಮಾಡೋದು ಇನ್ನೊಂದು ಎಂದು ಲೇವಡಿ ಮಾಡಿದ್ದಾರೆ.
ಇನ್ನೊಂದೆಡೆ, ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ಪಕ್ಷ, ‘ಊಟನೂ ನಮ್ದು ಎಣ್ಣೆನೂ ನಮ್ದು“ಎನ್ನುವ ಬಿಜೆಪಿ ಪಕ್ಷ ತನ್ನ ಹೆಸರನ್ನು ‘ಬಾರ್ ಜನತಾ ಪಾರ್ಟಿ’ ಎಂದು ಬದಲಿಸಿಕೊಳ್ಳುವುದು ಸೂಕ್ತ ಎಂದಿದೆ.
“ಊಟನೂ ನಮ್ದು ಎಣ್ಣೆನೂ ನಮ್ದು“
ಎನ್ನುವ @BJP4Karnataka ಪಕ್ಷ
”ಬಾರ್ ಜನತಾ ಪಾರ್ಟಿ” ಎಂದು ಹೆಸರು ಬದಲಿಸಿಕೊಳ್ಳುವುದು ಸೂಕ್ತ!ಜನಸಾಮಾನ್ಯರನ್ನು ಮದ್ಯದ ದಾಸರಾಗಲು ಪ್ರೋತ್ಸಾಹಿಸುವ ಬಿಜೆಪಿಯಿಂದ ಜನರ ಉದ್ದಾರವನ್ನು ಬಯಸುವುದು ಮೂರ್ಖತನವಾಗುತ್ತದೆ.
ಧರ್ಮ, ಸಂಸ್ಕೃತಿಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿಯ ಅಸಲಿ ಸಂಸ್ಕೃತಿ… pic.twitter.com/u8ONByrYCD
— Karnataka Congress (@INCKarnataka) July 8, 2024
ಜನಸಾಮಾನ್ಯರನ್ನು ಮದ್ಯದ ದಾಸರಾಗಲು ಪ್ರೋತ್ಸಾಹಿಸುವ ಬಿಜೆಪಿಯಿಂದ ಜನರ ಉದ್ದಾರವನ್ನು ಬಯಸುವುದು ಮೂರ್ಖತನವಾಗುತ್ತದೆ ಎಂದಿರುವ ಕಾಂಗ್ರೆಸ್, ಧರ್ಮ, ಸಂಸ್ಕೃತಿಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿಯ ಅಸಲಿ ಸಂಸ್ಕೃತಿ ಮಹಿಳಾ ಪೀಡನೆ, ಹೆಂಡದ ಸೇವನೆ’ ಎಂದು ಟೀಕಿಸಿದೆ.
ಸಂಸದ ಸುಧಾಕರ್ ಅವರು ಜನರಿಗೆ ಮದ್ಯದ ಬಾಟಲಿಗಳನ್ನು ಹಂಚುವ ಮೂಲಕ ಬಿಜೆಪಿಯ ನೈಜ ಸಂಸ್ಕೃತಿಯನ್ನು ಬಯಲು ಮಾಡಿದ್ದಾರೆ ಎಂದು ವಿಶ್ಲೇಷಿಸಿರುವ ಕಾಂಗ್ರೆಸ್, ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಬಿಜೆಪಿ ದೇಶಕ್ಕೆ ಹಾನಿಕರ’ ಎಂದು ಗೇಲಿ ಮಾಡಿದೆ.