ಬೆಂಗಳೂರು: ಜೂನ್ 21 ರಂದು ಕೋವಿಡ್ ಲಸಿಕೆ ಮೇಳಕ್ಕೆ ರಾಜ್ಯದಲ್ಲಿ ಮತ್ತೆ ಚಾಲನೆ ಸಿಗಲಿದೆ. 18-44 ವರ್ಷದವರಿಗೆ, 45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ 14 ಲಕ್ಷ ಕೋವಿಶೀಲ್ಡ್ ಡೋಸ್ ದಾಸ್ತಾನು ಇದ್ದು, ಸೋಮವಾರ 5 ರಿಂದ 7 ಲಕ್ಷ ಡೋಸ್ ನೀಡುವ ಗುರಿ ಇರಿಸಲಾಗಿದೆ. ಇದಕ್ಕೆ ಜನರ ಸಹಕಾರ ಬೇಕಿದೆ. ಈವರೆಗೆ 1.80 ಕೋಟಿ ಲಸಿಕೆ ನೀಡಲಾಗಿದೆ. ಅಂದರೆ ದೇಶದಲ್ಲಿ ನೀಡಿದ 15 ಲಸಿಕೆಯಲ್ಲಿ ಒಂದು ರಾಜ್ಯದ್ದು ಎಂದರು.
ಹೊಸ ವೈರಾಣು ಅಧ್ಯಯನಕ್ಕೆ ಜಿನೋಮಿಕ್ಸ್ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ ಅವರು, ಪ್ರತಿ ಜಿಲ್ಲಾಮಟ್ಟದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು. ಈ ಸಮಿತಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಿದೆ. ಈ ಮೂಲಕ 3 ನೇ ಅಲೆ ನಿಯಂತ್ರಿಸಲಾಗುವುದು ಎಂದರು.
ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿ 3 ನೇ ಅಲೆ ಸಿದ್ಧತೆ ಕುರಿತು ಪ್ರಾಥಮಿಕ ವರದಿ ನೀಡಿದೆ. ಅದನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದು. ಅಂತಿಮ ವರದಿ ಬಂದ ಬಳಿಕ 45 ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದವರು ತಿಳಿಸಿದರು.
ಡೆಲ್ಟಾ ವೈರಾಣು ವೇಗವಾಗಿ ಹರಡುತ್ತಿದೆ. ಇದಕ್ಕಾಗಿ ಡಿಸೆಂಬರ್ ವರೆಗೂ ನಿತ್ಯ ಒಂದೂವರೆ ಲಕ್ಷ ಪರೀಕ್ಷೆ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.