ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಕೇಕೆ ಮುಂದುವರಿದಿದ್ದು ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ಆಕ್ಸಿಜನ್ ದುರಂತ ವಿಚಾರದಲ್ಲಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಸಾಮಾಜಿಕ ಹೋರಾಟಗಾರರು ಹೈಕೋರ್ಟ್‌ನಲ್ಲಿ ಧಾವೆ ಹೂಡಿದ್ದರೆ, ಅದರ ಬೆನ್ನಲ್ಲೇ ಬೆಡ್ ಬ್ಲಾಕಿಂಗ್ ಹಗರಣವನ್ನು ಸ್ವತಃ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರೇ ಬೇಧಿಸಿದ್ದಾರೆ. ಇನ್ನೊಂದೆಡೆ ಬೆಂಗಳೂರಿನ ಒಂದು ಇಡೀ ಆಸ್ಪತ್ರೆಯು ಆರೋಗ್ಯ ಸಚಿವ ಸುಧಾಕರ್ ಅವರು ಪ್ರತಿನಿಧಿಸುವ ಚಿಕ್ಕಬಳ್ಳಾಪುರದ ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಆಪ್ತ ಶಾಸಕ ಎಸ್.ಆರ್.ವಿಶ್ವನಾಥ್ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಆರೋಗ್ಯ ಸಚಿವರ ಸರಣಿ ವಿವಾದಗಳ ಬಗ್ಗೆ ಬಿಜೆಪಿಯೊಳಗೆ ಅಸಮಾಧಾನದ ಮಾತುಗಳು ಕೇಳಿಬಂದಿದೆ.
ಟೆಸ್ಟ್ ವಿಚಾರದಲ್ಲೂ ದ್ರೋಹ..?
ದೇಶದಲ್ಲೀಗ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ನಿತ್ಯವೂ ಮೂರೂವರೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಕೇಸ್‌ಗಳು ವರದಿಯಾಗುತ್ತಿವೆ. ಸೋಂಕಿನ ಪ್ರಮಾಣ ಗಮನಿಸಿದರೆ ಕರ್ನಾಟಕವೂ ಮುಂಚೂಣಿಯಲ್ಲಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದ್ದು, ಇದನ್ನು ಮರೆಮಾಚಲು ಟೆಸ್ಟಿಂಗ್ ಪ್ರಮಾಣವನ್ನೇ ಕಡಿಮೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಂತೆ ಕರ್ನಾಟಕದ ಮಾಧ್ಯಮಗಳು ಬೆಳಕುಚೆಲ್ಲಿವೆ. ಸತ್ಯವನ್ನು ಮರೆಮಾಚಲು ಹೋಗಿ ಸೋಂಕು ಉಲ್ಬಣಗೊಂಡರೆ, ಸಾವಿನ ಪ್ರಮಾಣ ಹೆಚ್ಚಿದರೆ ಯಾರು ಹೊಣೆ ಎಂಬುದು ಮಾಧ್ಯಮಗಳ ಪ್ರಶ್ನೆ.
ಇದಕ್ಕೆ ಯಾರು ಹೊಣೆ..?
ಸೋಂಕು ತಡೆಗೆ ಕ್ರಮ ಕೈಗೊಳ್ಳಬೇಕೇ ಹೊರತು ಟೆಸ್ಟಿಂಗ್ ಕಡಿತದ ತೀರ್ಮಾನ ಅತ್ಯಂತ ಬಾಲಿಷ ಎನ್ನುತ್ತಿದ್ದಾರೆ ತಜ್ಞರು. ಈ ರೀತಿ ಸೂಚಿಸಿದವರು ಯಾರು? ಈ ಬಗ್ಗೆ ಆರೋಗ್ಯ ಸಚಿವರ ಮೌನವೇಕೆ ಎಂಬುದು ಪ್ರಜ್ಞಾವಂತರ ಪ್ರಶ್ನೆ.
ಬಿಜೆಪಿ ಕಾರ್ಯಕರ್ತರ ಆಕ್ರೋಶ..
ರಾಜ್ಯ ಸರ್ಕಾರದ ಈ ಕ್ರಮದ ಬಗ್ಗೆ ಬಿಜೆಪಿ ವಲಯದಲ್ಲೇ ಆಕ್ರೋಶ ವ್ಯಕ್ತವಾಗಿದೆ. ಆರೋಗ್ಯ ಸಚಿವರು ಸರ್ಕಾರದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಲವು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಪ್ರತಿಷ್ಠೆ ಉಳಿಸಲು ಜನಸಾಮಾನ್ಯರನ್ನು ಬಲಿಕೊಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಆಪ್ತರೊಬ್ವರು ಉದಯ ನ್ಯೂಸ್ ಜೊತೆ ಹಂಚಿಕೊಂಡ ಮಾತು.
ಇದನ್ನೂ ಓದಿ.. ಆರೋಗ್ಯ ಇಲಾಖೆಯ ವೈಫಲ್ಯ: ಸಚಿವ ಸುಧಾಕರ್ ಬಗ್ಗೆ ಸಂಘ ಪರಿವಾರದಲ್ಲೇ ಬೇಸರ
ಇದೇ ವೇಳೆ, ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿದ ಸಂದರ್ಭದಲ್ಲಿ ಸಚಿವ ಸುಧಾಕರ್ ವಿರುದ್ದವೇ ಹಲವರಿಂದ ಆಕ್ರೋಶ ವ್ಯಕ್ತವಾಯಿತು. ಇಂತಹಾ ಅವಾಂತರಗಳ ಕಾರಣದಿಂದಾಗಿಯೇ ಬಹುತೇಕ ಎಂಪಿಗಳು ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ರಹಸ್ಯವೂ ಜಗನ್ನಾಥ ಭವನದ ಪ್ರಮುಖರಿಂದ ವ್ಯಕ್ತವಾಯಿತು.
ಸಂತೋಷ್‌ಜೀ, ಮುಕುಂದ್‌ಜೀ ಅವರ ಗಮನಕ್ಕೆ ತನ್ನಿ ಪ್ಲೀಸ್..
ಬಿಜೆಪಿಯೊಳಗೆ ಸಚಿವ ಸುಧಾಕರ್ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದೆ. ಮಾಧ್ಯಮಗಳಲ್ಲಿ ಎಷ್ಟೇ ಪ್ರಸಾರವಾದರೂ ಬಿಎಸ್‌ವೈ ಅವರು ಕ್ರಮಕೈಗೊಳ್ಳುವುದಿಲ್ಲ. ದಯವಿಟ್ಟು ಸಂತೋಷ್‌ಜೀ ಅಥವಾ ಮುಕುಂದ್‌ಜೀ (ಆರ್‌ಎಸ್‌ಎಸ್ ಸಹ ಸರಕಾರ್ಯವಾಹ) ಅವರ ಗಮನಕ್ಕೆ ತನ್ನಿ. ಅವರ ಆಬಿಪ್ರಾಯವನ್ನೂ ಪ್ರಕಟಿಸಿ ಎನ್ನುತ್ತಿದ್ದಾರೆ ಬಿಜೆಪಿಯ ಮೂಲ ಕಾರ್ಯಕರ್ತರು.