ಬೆಂಗಳೂರು: ಜಾರಕಿಹೊಳಿ ವಿವಾದ ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ವಿವಾದವನ್ನು ಮುಂದಿಟ್ಟು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ವಿರುದ್ದ ಧ್ವನಿ ಎತ್ತಲು ಕಾಂಗ್ರೆಸ್ ತೀರ್ಮಾನಿಸಿದೆ.
ವಿವಾದಿತ ಸಿಡಿ ಕುರಿತಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶನಿವಾರ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ಅದೇ ಹೊತ್ತಿಗೆ ಯುವತಿಯ ವೀಡಿಯೋ ಹೇಳಿಕೆ ಬಿಡುಗಡೆಯಾಗಿತ್ತು. ಈ ಪ್ರಕರಣಗಳ ಕುರಿತು ವಿಶೇಷ ತನಿಖಾ ದಳ ತನ್ನದೇ ರೀತಿಯಲ್ಲಿ ತನಿಖೆ ನಡೆಸಲಿದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನೊಂದೆಡೆ ಈ ವಿವಾದ ಕುರಿತಂತೆ ವಿಧಾನಸಭೆಯಲ್ಲಿ ಧ್ವನಿ ಎತ್ತಲು ಕಾಂಗ್ರೆಸ್ ಮುಂದಾಗಿದೆ. ರಕ್ಷಣೆ ಕೋರಿ ಮಹಿಳೆ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಸುದ್ದಿಗಾರರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಪ್ರತಿಕ್ರಿಯೆ ಕೇಳಿದಾಗ ಅವರು ತಮ್ಮದೇ ದಾಟಿಯಲ್ಲಿ ಉತ್ತರಿಸಿದರು. ‘ನಾನು ನಿಮ್ಮ ಜತೆ ಮಾತನಾಡುವುದಿಲ್ಲ. ಇದರ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ’ ಎಂದವರು ಹೇಳಿದರು.
ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಈ ಬಗ್ಗೆಯೂ ಪ್ರತಿಕ್ರಿಯೆ ನೀಡಲ್ಲ, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗ್ಲಿ ಬಿಡಿ ಎಂದರು.