ಏ.2ರಂದು ‘ಪ್ರಥಮ ರಾಷ್ಟೀಯ ತುಳು ಪತ್ರಿಕಾ ಸಮ್ಮಿಲನ’.. ತುಳುನಾಡಿನ ಪಾಲಿಗಿದು ಅಪೂರ್ವ ನುಡಿ ಸುಗ್ಗಿ… ಈ ಹಬ್ಬ ಸಂಭ್ರಮದ ಸಿದ್ದತೆಗೆ ಸಿಗುತ್ತಿದೆ ಅಂತಿಮ ಸ್ಪರ್ಶ
ಮಂಗಳೂರು: ತುಳುನಾಡಿನ ವೈಭವ ಮೇಳೈಸಲು ವೇದಿಕೆಯೊಂದು ಸಜ್ಜಾಗುತ್ತಿದೆ. ಏಕೈಕ ತುಳು ಪತ್ರಿಕೆ ‘ಪೂವರಿ’ ಬಳಗದ ಸಾರಥ್ಯ ಹಾಗೂ ತುಳು ಬಾಂಧವರ ಸಾಂಗತ್ಯದಲ್ಲಿ ಸಾರಸ್ವತ ಸಂಭ್ರಮಕ್ಕೆ ತಯಾರಿ ಸಾಗಿದ್ದು, ಈ ಸಿದ್ದತೆಗೆ ಈಗ ಅಂತಿಮ ಸ್ಪರ್ಶ ಸಿಗುತ್ತಿದೆ.
ಕರಾವಳಿಯ ಪ್ರಸಿದ್ದ ಶ್ರದ್ಧಾಕೇಂದ್ರ ಒಡಿಯೂರು ಮಠದ ಶ್ರೀಗಳ ಜನ್ಮ ಷಷ್ಟ್ಯಬ್ಧ ಸಂಭ್ರಮದ ಪ್ರಯುಕ್ತ ‘ಪೂವರಿ’ ಪತ್ರಿಕಾ ಬಳಗ ಹಾಗೂ ಷಷ್ಟ್ಯಬ್ಧ ಪುತ್ತೂರು ತಾಲೂಕು ಸಮಿತಿ ಸಹಯೋಗದಲ್ಲಿ ತುಳುನಾಡಿನಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ‘ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ’ ಕಾರ್ಯಕ್ರಮ ಇದಾಗಿದೆ ಎಂದು ತುಳು ಸಾಹಿತ್ಯ ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಸಾಹಿತಿ ಹಾಗೂ ಪೂವರಿ ಪತ್ರಿಕೆಯ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಹೇಳಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಪುರಾಣ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಕಾರ್ಯಕ್ರಮ ನಾಡಿನ ಗಮನಸೆಳೆಯಿತು.
ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ‘ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನದ ಆಮಂತ್ರಣ ಪತ್ರಿಕೆ’ ಬಿಡುಗಡೆಗೊಳಿಸಿದರು.
ಏ. 2ರಂದು ‘ಪ್ರಥಮ ರಾಷ್ಟೀಯ ತುಳು ಪತ್ರಿಕಾ ಸಮ್ಮಿಲನ’ ನಡೆಯಲಿದ್ದು ಇದು ತುಳುನಾಡಿನ ಪಾಲಿಗೆ ವೈಭವದ ‘ನುಡಿ ಜಾತ್ರೆ’ಯಾಗಲಿದೆ. ಈ ನುಡಿ ಹಬ್ಬ ಯಶಸ್ವಿಯಾಗಿ ನಡೆಯಲಿ ಎಂದು ಕೇಶವ ಪ್ರಸಾದ್ ಮುಳಿಯ ಶುಭ ಹಾರೈಸಿದರು.
ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ತುಳುನಾಡಿನ ಪರಂಪರೆ, ಸಂಸ್ಕೃತಿ ಉಳಿವಿಗೆ ಸಂಬಂಧಿಸಿದ ಈ ಸಮ್ಮಿಳನ ಸನ್ನಿವೇಶ ತುಳುನಾಡಿನ ಪಾಲಿಗೆ ಅಪೂರ್ವ ಎನಿಸಲಿದೆ ಎಂದು ಅಭಿಪ್ರಾಯಪಟ್ಟರು.
ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ ರೈ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಪುತ್ತಿಲ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್., ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಷಷ್ಟ್ಯಬ್ಧ ಸಮಿತಿ ಗೌರವ ಸಲಹೆಗಾರ ದೇವಪ್ಪ ನೋಂಡ, ಸಂಯೋಜಕ ರಾಜೇಶ್ ಬನ್ನೂರು, ಕಾರ್ಯದರ್ಶಿ ರಂಜಿನಿ ಶೆಟ್ಟಿ, ಸದಸ್ಯರಾದ ಕಲಾವಿದ ಕೃಷ್ಣಪ್ಪ ಶಿವನಗರ, ಭಾಸ್ಕರ ಬಾರ್ಯ, ಲೋಕೇಶ್ ಹೆಗ್ಡೆ, ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕ ಕೆ. ವೆಂಕಟೇಶ ಸುಬ್ರಹ್ಮಣ್ಯ ಭಟ್ ಮೊದಲಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಳು ‘ನುಡಿ ಸುಗ್ಗಿ’ಯ ಯಶಸ್ಸಿಗೆ ಸಲಹೆಗಳನ್ನು ಮುಂದಿಟ್ಟರು.