ಬೆಂಗಳೂರು: ಬೆಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಕೋವಿಡ್ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 1,400 ಸೋಂಕಿತರು ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇದು ಅತಿ ಹೆಚ್ಚು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹೊರ ರಾಜ್ಯಗಳಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ ಸೋಂಕು ಕಂಡುಬರುತ್ತಿದೆ. ಕರ್ನಾಟಕಕ್ಕೆ ಕೇರಳ, ಮಹಾರಾಷ್ಟ್ರ, ಪಂಜಾಬ್ ಚಂಡೀಗಡದಿಂದ ಬಂದವರಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಎಲ್ಲ ರಾಜ್ಯದಿಂದ ಬಂದವರಿಗೆ ಈ ನಿಯಮ ಅನ್ವಯಿಸಲು ತೀರ್ಮಾನಿಸಲಾಗಿದೆ ಎಂದರು.
ಸಭೆ, ಸಮಾರಂಭಗಳಲ್ಲಿ ಒಳಾಂಗಣದಲ್ಲಿ 200, ಹೊರಾಂಗಣದಲ್ಲಿ 500 ಮಂದಿ ಸೇರಲು ಅವಕಾಶ ನೀಡಲಾಗಿದೆ. ಪ್ರತಿ ವಾರ್ಡ್ ಗೆ ಒಂದರಂತೆ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಸೋಂಕಿತರ ಸಂಖ್ಯೆ ನೀಡಿಕೊಂಡು ಆಂಬ್ಯುಲೆನ್ಸ್ ಸಂಖ್ಯೆ ಕೂಡ ಹೆಚ್ಚಿಸಲಾಗುವುದು. ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ನಿಗಾ ಇರಿಸುವುದು ಮೊದಲಾದ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದರು.
ಸೋಂಕು ನಿಯಂತ್ರಣಕ್ಕೆ ನಿಗದಿತ ಪ್ರದೇಶಗಳಲ್ಲಿ ಸ್ಯಾನಿಟೈಜ್ ಮಾಡಲಾಗುವುದು. ಹಾಸಿಗೆ ಲಭ್ಯತೆ, ಐಸಿಯು ಲಭ್ಯತೆ ಬಗ್ಗೆ ಆನ್ ಲೈನ್ ನಲ್ಲೇ ಮಾಹಿತಿ ದೊರೆಯಲು ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರನ್ನು ಕೋವಿಡ್ ಮುಕ್ತ ಮಾಡಲು ಜನರ ಸಹಕಾರ ಬೇಕಿದೆ ಎಂದರು.