ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಡಿ ವಿವಾದ ತಲ್ಲಣ ಸೃಷ್ಟಿಸಿದ್ದು ಆಡಳಿತ ಪ್ರತಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಈ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಈ ವಿವಾದ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ನಾಯಕರು ಎದಿರೇಟು ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಬಳಿ ಯಾವುದಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇಕನಾಮಿಕ್ಸ್ ಅಫೆನ್ಸ್ ಪ್ರಕರಣ ಕುರಿತ ವಿಚಾರಣೆಗೆ ಹಾಜರಾದ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ವೇಳೆ ರಮೇಶ್ ಜಾರಕಿಹೊಳಿಯವರ ಹೇಳಿಕೆ ಕುರಿತಂತೆ ಸುದ್ದಿಗಾರರು ಡಿ.ಕೆ.ಶಿವಕುಮಾರ್ ಅವರ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿಯವರ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡುವುದು ಬೇಡ ಎಂದು ಹೇಳಿದವರು ಯಾರು? ಅದರಲ್ಲಿ ಶಾಕ್ ಆದರೂ ಇರಲಿ, ಏನಾದರೂ ಇರಲಿ. ಅವರಿಗೆ ಒಳ್ಳೆಯದಾಗಲಿ ಪಾಪ’ ಎಂದರು.
ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ರಕ್ಷಣೆ ನೀಡುವುದು, ದೌರ್ಜನ್ಯವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಮೂಲಭೂತ ಕರ್ತವ್ಯ ಎಂದೂ ಡಿಕೆಶಿ ಹೇಳಿದರು.