ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ದಿನೇ ದಿನೆ ವ್ಯಾಪಕವಾಗಿ ಹೆಚ್ಚಳವಾಗುತ್ತಿದ್ದು, ಹಲವಾರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಅಪಾರ್ಟ್ ಮೆಂಟ್ ಗಳ ಆವರಣದಲ್ಲೇ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಆಸಕ್ತಿ ವಹಿಸುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಆವರಣದಲ್ಲಿ ಸ್ಥಳಾವಕಾಶವಿದ್ದರೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ವಲಯ ಆಯುಕ್ತರ ಅನುಮೋದನೆ ಪಡೆದು ಪ್ರಾರಂಭಿಸಬಹುದಾಗಿದೆ ಎಂದು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ತಿಳಿಸಿದ್ದಾರೆ.
ಅಪಾರ್ಟ್ ಮೆಂಟ್ ಗಳಲ್ಲಿ ಕೋವಿಡ್ ಸೋಂಕು ನಿರ್ವಹಣೆ ಹಾಗೂ ಮೈಕ್ರೊ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರಯುವ ಸಲುವಾಗಿ ಇಂದು ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಬೆಂಗಾಳೂರು ನಗರದಲ್ಲಿ ಶೇ. 90 ರಷ್ಟು ಮಂದಿ ಸೋಂಕಿತರು ಮನೆಯಲ್ಲೇ ಐಸೋಲೇಟ್ ಆಗಿ ಆರೈಕೆ ಪಡೆಯುತ್ತಿದ್ದಾರೆ. ಇದಲ್ಲದೆ ಹೋಟೆಲ್‌ಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಕೂಡಾ ತೆರೆಯಲಾಗುತ್ತಿದೆ. ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ಸೋಂಕು ಲಕ್ಷಣಗಳು ಕಂಡುಬಂದರೆ ಸ್ವಯಂ ಐಸೋಲೇಟ್ ಆಗಿ ಜಾಗೃತಿವಹಿಸಬೇಕು. ಹೋಮ್ ಐಸೋಲೇಟ್ ನಲ್ಲಿರುವವರಿಗೆ ಮೆಡಿಕಲ್ ಕಿಟ್ ಅನ್ನು ಪಾಲಿಕೆಯಿಂದ ನೀಡುತ್ತೇವೆ. ಏನಾದರು ಮಾಹಿತಿ, ಆಸ್ಪತ್ರೆಗೆ ದಾಖಲಾಗಬೇಕಾದರೆ ಪಾಲಿಕೆ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ನಗರದಲ್ಲಿ 1912 ಸಂಖ್ಯೆಗೆ ಹೆಚ್ಚು ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ 500 ಲೈನ್‌ಗಳನ್ನು ಹೆಚ್ಚಿಸಲಾಗಿದೆ ಎಂದರು.
ಇದೀಗ ಅಪಾರ್ಟ್ಮೆಮಂಟ್ಸ್ ನಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಸ್ಥಳಾವಕಾಶವಿದೆಯೇ ಎಂಬುದನ್ನು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅನುಮೋದನೆ ಸಿಕ್ಕ ಬಳಿಕ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಕೋವಿಡ್ ಆರೈಕೆ ಕೇಂದ್ರಗಳನ್ನು ನಡೆಸಿಕೊಂಡು ಹೋಗಬಹುದು ಎಂದು ತಿಳಿಸಿದರು.
ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಕೋವಿಡ್ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು RWA/Apartments Owners Association / Companies / NGO ಗಳು ಅವರದೇ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲು ಆಸಕ್ತಿ ವಹಿಸುತ್ತಿದ್ದಾರೆ. ಅಪಾರ್ಟ್ಮೆಂಟ್ಸ್ ಗಳ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರಯಬೇಕಾದರೆ, ಅಪಾರ್ಟ್ಮೆಂಟ್ಸ್ ಆವರಣದಲ್ಲಿ ಕಮ್ಯುನಿಟಿ ಹಾಲ್, ಪ್ಲಾಟ್ ಇರಬೇಕು, ಮಹಿಳೆ ಹಾಗೂ ಮಕ್ಕಳಿಗೆ ಪ್ರತ್ಯೇಕ ಸ್ಥಳ ಇರಬೇಕು, 10×10 ಅಡಿಯುಳ್ಳ ಶೌಚಾಲಯದ ವ್ಯವಸ್ಥೆಯಿರಬೇಕು, ಕೊಠಡಿ ವಿಶಾಲವಾಗಿರಬೇಕು, ಒಂದು ಹಾಗೂ ಮತ್ತೊಂದು ಹಾಸಿಗೆಗೆ ಕನಿಷ್ಟ 6 ಅಡಿ ಅಂತರವಿರಬೇಕು, ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಟೆಂಡರ್ ವ್ಯವಸ್ಥೆಯಿರಲಿದೆ ಎಂದರು.
ಕೋವಿಡ್ ಆರೈಕೆ ಕೇಂದ್ರ ತೆರೆದರೆ ಯಾವುದಾದರು ಆಸ್ಪತ್ರೆ/ನರ್ಸಿಂಗ್ ಹೋಮ್‌ಗಳ ಜೊತೆ ಟೈ-ಅಪ್ ಮಾಡಿಕೊಂಡು ಆರೈಕೆ ಪಡೆಯುವವರಿಗೆ ಆರೈಕೆ ಮಾಡಲಾಗುವುದು. 100 ಹಾಸಿಗೆಗೆ ಒಬ್ಬ ವೈದ್ಯ, 50 ಹಾಸಿಗೆಗೆ ಒಬ್ಬ ಸಿಬ್ಬಂದಿ, 25 ಹಾಸಿಗೆಗೆ ಒಬ್ಬ ಗ್ರೂಪ್ ಡಿ ನೌಕರರಿರಬೇಕು. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್, ಪಲ್ಸಿ ಆಕ್ಸಿಮೀಟರ್, ಪಿಪಿಇ ಕಿಟ್, ಅಗತ್ಯ ಮಾತ್ರೆಗಳು ಇರಬೇಕು. ಯಾರಿಗಾದರು ಸಮಸ್ಯೆಯಾದರೆ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯಸವ್ಥೆಯಿರಬೇಕು. ಮಾಹಿತಿ ಸಂಗ್ರಹಿಸುವ ಸಲುವಾಗಿ ಡಾಟಾ ಎಂಟ್ರಿ ಆಪರೇಟರ್ ಇರಬೇಕು. ಯಾರಾದರು ಕೋವಿಡ್ ಆರೈಕೆ ಕೇಂದ್ರ ತೆರೆಯಲು ಇಚ್ಛಿಸಿದರೆ ಪಾಲಿಕೆಗೆ ಮಾಹಿತಿ ನೀಡಿದಲ್ಲಿ ಆಯಾ ವಲಯ ಆರೋಗ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೋವಿಡ್ ಆರೈಕೆ ಕೇಂದ್ರ ನಡೆಸಲು ಸ್ಥಳಾವಕಾಶವಿದ್ದಲ್ಲಿ ವಲಯ ಆಯುಕ್ತರು ಅನುಮೋದನೆ ನೀಡಲಿದ್ದಾರೆ. ಅನಂತರ ಮಾರ್ಗಸೂಚಿಗಳ ಅನುಸಾರ ಕೋವಿಡ್ ಆರೈಕೆ ಕೇಂದ್ರವನ್ನು ನಡೆಸಬಹುದಾಗಿದೆ ಎಂದು ಮಾಹಿತಿ ನೀಡಿದರು.