ಬೆಂಗಳೂರು: ಒಂದಿಲ್ಲೊಂದು ನಿಯಮ ಬಾಹಿರ ನಡೆಯಿಂದ ಇಕ್ಕಟ್ಟಿಗೆ ಸಿಲುಕುತ್ತಿರುವ ರಾಜ್ಯ ಸರ್ಕಾರ ಇದೀಗ ವಿಧಾನ ಪರಿಷತ್ ಸಿಬ್ಬಂದಿ ವೇತನ ವಿಚಾರದಲ್ಲೂ ವಿವಾದದಲ್ಲಿ ಸಿಲುಕಿದೆ. ಈ ವಿಚಾರವನ್ನು ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಬಹಿರಂಗಪಡಿಸಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕಿಯೋನಿಕ್ಸ್ ಮುಖಾಂತರ ನೇಮಕ ಆಗಿರುವ ಗುತ್ತಿಗೆ ಆಧಾರದ ಮತ್ತು ಇತರೆ ತಾತ್ಕಾಲಿಕ ಸಿಬ್ಬಂದಿಗೆ ನಿಯಮ ಮೀರಿ ಹೆಚ್ಚುವರಿ ವೇತನ ಪಾವತಿ ಮಾಡಿದ್ದು ಸರ್ಕಾರಕ್ಕೆ ಸುಮಾರು 48 ಲಕ್ಷ ರೂಪಾಯಿ ನಷ್ಟ ಆಗಿದೆ ಎಂದು ಅವರು ಗಮನಸೆಳೆದಿದ್ದಾರೆ. ಈ ನೇಮಕಾತಿ ಅಕ್ರಮ ಆಗಿದ್ದು ಸ್ವಜನಪಕ್ಷಪಾತದ ನಡೆ ಅನುಸರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ವಿಶೇಷ ಮಂಡಳಿ (Special Board) ಮೂಲಕ ತನಿಖೆ ನಡೆಸಬೇಕೆಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.
ರಮೇಶ್ ಬಾಬು ದೂರಿನಲ್ಲಿ ಏನಿದೆ..?
ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಪರಿಷತ್ ಸಿಬ್ಬಂದಿಯ ವೇತನ ವಿಚಾರದಲ್ಲಿನ ಅಕ್ರಮ ಕುರಿತು ಕರ್ನಾಟಕ ವಿಧಾನ ಮಂಡಲದ ವಿಶೇಷ ಮಂಡಳಿಯ ಅಧ್ಯಕ್ಷರಾದ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ. ಈ ಪತ್ರ ಹೀಗಿದೆ.
ಕರ್ನಾಟಕ ವಿಧಾನ ಪರಿಷತ್ ಸಂಸದೀಯ ವ್ಯವಸ್ಥೆಯಲ್ಲಿ ತನ್ನದೇ ಆದ ಗೌರವವನ್ನು ಹೊಂದಿದ್ದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮುಕಟ ಪ್ರಾಯವಾಗಿದೆ. ವಿಧಾನ ಪರಿಷತ್ತಿನ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿರುತ್ತದೆ. ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಅಕ್ರಮ ನೇಮಕಾತಿ ನಡೆದಿದ್ದು, ಸುಮಾರು 48 ಲಕ್ಷ ರೂಪಾಯಿ ಹೆಚ್ಚುವರಿ ವೇತನ ಪಾವತಿ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿರುವುದಾಗಿ ಬಂದಿರುವ ವರದಿಗಳು ಅಘಾತಕಾರಿ.
ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ ಮಾಡಿರುವ ನೇಮಕಾತಿ ಅಕ್ರಮವಾಗಿದ್ದು, ಈ ಸಂಬಂಧ ಪರಿಷತ್ತಿನ ಸಚಿವಾಲಯ ಮತ್ತು ಅರ್ಥಿಕ ಇಲಾಖೆಯೊಂದಿಗೆ ನಡೆದಿರುವ ಪತ್ರ ವ್ಯವಹಾರಗಳನ್ನು ಪಾರದರ್ಶಕತೆಯ ದೃಷ್ಟಿಯಿಂದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಬಹಿರಂಗಗೊಳಿಸಿ. ನಿಯಾಮವಳಿಗಳನ್ನು ಮೀರಿ ಹೆಚ್ಚುವರಿ ವೇತನ ಪಾವತಿ ಮಾಡಿರುವ ಸಚಿವಾಲಯದ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು, ವಿಧಾನ ಪರಿಷತ್ತಿನ ಐದು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ತನಿಖೆಗೆ ಒಳಪಡಿಸಿ. ಸಚಿವಾಲಯದ ಅಧಿಕಾರಿಗಳ ಸಂಬಂಧಿಕರಾದ ನಿಖಿಲ್ ಮತ್ತು ಸುಹಾಸ್ ಎಂಬುವರು, ನಿಯಮಾವಳಿ ಮೀರಿ ನೇಮಕಗೊಂಡು ಸ್ವಜನ ಪಕ್ಷಪಾತಕ್ಕೆ ಒಳಗಾಗಿರುವುದನ್ನು ತನಿಖೆಗೆ ಒಳಪಡಿಸಿ. ತಾಂತ್ರಿಕ ಹುದ್ದೆಗಳಿಗೆ ಪರೀಕ್ಷೆ ಮತ್ತು ಸಂದರ್ಶನಗಳಿಲ್ಲದೆ ನೇಮಕ ಮಾಡಿರುವುದು ಸಂಪೂರ್ಣ ಅಕ್ರಮವಾಗಿರುತ್ತದೆ. ಪರಿಷತ್ತಿನ ಸಚಿವಾಲಯದ ಸಂಬಂಧಿಕರು, ನಿಕಟವರ್ತಿಗಳು ಅಕ್ರಮದ ಮೂಲಕ ನೇಮಕಾತಿಗಳನ್ನು ಪಡೆದುಕೊಂಡಿದ್ದು, ತನಿಖೆ ಪೂರ್ವದಲ್ಲಿ ಇವರನ್ನು ಕೆಲಸದಿಂದ ಬಿಡುಗಡೆ ಮಾಡಿ.
ಸದರಿ ಪ್ರಕರಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಾವು ಸ್ವಯಂಪ್ರೇರಿತವಾಗಿ ಲೋಕಾಯುಕ್ತ ತನಿಖೆಗೂ ಒಳಪಡಿಸಿ. ವಿಧಾನ ಪರಿಷತ್ತಿನಲ್ಲಿ ಅಕ್ರಮ ವಾಸನೆಗಳು ಪದೇ ಪದೇ ಮರುಕಳಿಸುತ್ತಿದ್ದು ಇದನ್ನು ತಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇರುತ್ತದೆ. ಈ ಅಕ್ರಮಗಳನ್ನು ಬೆತ್ತಲೆ ಮಾಡದೇ ಹೋದರೆ ಸಾರ್ವಜನಿಕ ಜೀವನದಲ್ಲಿ ವಿಧಾನ ಪರಿಷತ್ತಿಗೂ ಕಳಂಕ ಅಂಟಿಕೊಂಡು, ಜನರು ಮತ್ತಷ್ಟು ಅನುಮಾನ ಮತ್ತು ಅಸಡ್ಡೆಯಿಂದ ನೋಡುತ್ತಾರೆ.
ಪರಿಷತ್ತಿನ ಸಚಿವಾಲಯದ ಅಧಿಕಾರಿಗಳು ನೆಪಮಾತ್ರದ ತನಿಖೆ ಮಾಡಿಸಿ ವರದಿಯ ಮೂಲಕ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕ ಹಣವನ್ನು ಪೋಲು ಮಾಡಿ ಸ್ವಜನ ಪಕ್ಷಪಾತಕ್ಕೆ ಕಾರಣವಾಗಿರುವ ಈ ಅಕ್ರಮ ನೇಮಕಾತಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆಯುವುದರ ಜೊತೆಗೆ ಷಾಮೀಲಾಗಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಿ ತನಿಖೆಗೆ ಒಳಪಡಿಸಿ. ವಿಧಾನ ಪರಿಷತ್ತಿನ ಸಚಿವಾಲಯ ಇಂತಹ ಅಕ್ರಮ ಕರ್ಮಕಾಂಡಕ್ಕೆ ಒಳಗಾಗಿರುವುದು ವಿಷಾದಕರ. ವಿಧಾನ ಪರಿಷತ್ತಿನ ನೇಮಕಾತಿ ಹಾಗೂ ಖರ್ಚು ವೆಚ್ಚಗಳು ಸಾರ್ವಜನಿಕ ಹಿತದೃಷ್ಟಿಯಿಂದ ಪಾರದರ್ಶಕ ಆಗಬೇಕಿದ್ದು ಈ ನಿಟ್ಟಿನಲ್ಲಿ ಪರಿಷತ್ತಿನ ನಿಯಾಮವಳಿಗಳು ಬದಲಾವಣೆ/ತಿದ್ದುಪಡಿ ಆಗಬೇಕಾಗಿದೆ. ಆದುದರಿಂದ ಸದರಿ ಪ್ರಕರಣವನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ವಿಶೇಷ ಮಂಡಳಿಯ ಮುಂದೆ ಮಂಡಿಸಿ ನಿಯಾಮವಳಿ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕಿದೆ.
ಸೂಕ್ತ ಕ್ರಮಕ್ಕೆ ಸಿಎಂ ಸೂಚನೆ..
ಈ ನಡುವೆ, ಪ್ರದೇಶ ಕಾಂಗ್ರೆಸ್ ವಕ್ತಾರರೂ ಆಗಿರುವ ರಮೇಶ್ ಬಾಬು ಅವರ ಮನವಿ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕಾಗಿ ಮುಖ್ಯಮಂತ್ರಿಗಳ ಕಾರ್ಯಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಈ ಕುರಿತಂತೆ ಸಿಎಂ ಕಚೇರಿ ಮೂಲಗಳು ತಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.