ಬೆಂಗಳೂರು: ಕೆಲವು ದಿನಗಳಿಂದೀಚೆಗೆ ಕೊರೋನಾ ಸೋಂಕಿಗೆ ಶಿಕ್ಷಕರು ಬಲಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನೂ ಕೊರೋನಾ ವಾರಿಯರ್ಸ್ ಎಂದು ಘೋಷಿಸುವಂತೆ ಒತ್ತಡ ಹೆಚ್ಚಾಗುತ್ತಿದೆ.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಿಎಂ ಯಡಿಯೂರಪ್ಪರಿಗೆ ಬರೆದಿರುವ ಪತ್ರ ಗಮನಸೆಳೆದಿದೆ. ಕೋವಿಡ್ ಎರಡನೇ ಅಲೆಯಲ್ಲಿ ಹಲವು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ ಹೀಗಾಗಿ ಅವರನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಉಪ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದ ಹಲವು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದ ಸಂಗತಿಯತ್ತ ಬೆಳಕು ಚೆಲ್ಲಿರುವ ಹೊರಟ್ಟಿ, ಜನಗಣತಿ, ಸೇರಿದಂತೆ ಹಲವು ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ, ಆದರೂ ಸರ್ಕಾರ ಅವರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ, ಅವರಿಗೆ ಆರೋಗ್ಯ ಸೌಲಭ್ಯ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರನ್ನೂ ಕೊರೋನಾ ವಾರಿಯರ್ಸ್ ಎಂದು ಘೋಷಿಸಿ, ಶಿಕ್ಷಕರ ಕುಟುಂಬದವರಿಗೂ ಲಸಿಕೆ ನೀಡಬೇಕು ಎಂದು ಸಭಾಪತಿಯವರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.