ಬೆಂಗಳೂರು: ಕೋವಿಡ್ ಸಂಕಟ ಕಾಲದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಮಂದಿ ಪೈಕಿ ಆಶಾ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಆದರೆ ಸರ್ಕಾರ ಅವರ ಮೂಲ ಬೇಡಿಕೆಯನ್ನೇ ಬಗೆಹರಿಸಿಲ್ಲ. ಅಷ್ಟೇ ಅಲ್ಲ, ಕೊರೋನಾ ವಾರಿಯರ್‌ಗಳ ವಿಮಾ ಕವಚವನ್ನೂ ರದ್ದುಗೊಳಿಸಿ ಆತಂಕವನ್ನು ಹೆಚ್ಚಿಸಿದೆ.
ಮಾರ್ಚ್ 24 ರಂದು ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಪ್ರಕಟಣೆಯೊಂದನ್ನು ನೀಡಿ, ಕೊರೊನಾ ವಾರಿಯರ್‌ಗಳಿಗೆ ಇದ್ದ 50 ಲಕ್ಷ ರೂ. ಗಳ ವಿಮಾ ಕವಚವನ್ನು ಅಂತ್ಯಗೊಳಿಸಿರುವುದಾಗಿ ಹೇಳಿದ್ದಾರೆ. ಈ ನಿರ್ಧಾರದಿಂದ ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಮಂದಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಕ್ರೋಶ ಹೊರಹಾಕಿದೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡಿಗಡೆ ಮಾಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರ ಕೆ.ಸೋಮಶೇಖರ್ ಹಾಗೂ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ರಾಜ್ಯ ಸರ್ಕಾರವು ತನ್ನ ಈ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಿನ ಎರಡನೇ ಅಲೆ ತೀವ್ರ ಸ್ಪರೂಪದ್ದಾಗಿದ್ದು, ಅಧಿಕ ಸಾವುಗಳಿಗೆ ಕಾರಣವಾಗುತ್ತಿದೆ. ಇಂತಹ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸಂಕಷ್ಟ ದಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಇವರಿಗೆ ಕೇಂದ್ರ ಸರ್ಕಾರ ಈಗ ಆಘಾತ ನೀಡಿದೆ. ಇದು ನಿಜಕ್ಕೂ ಅಮಾನವೀಯತೆ. ಜನರ ಜೀವ ಉಳಿಸಲು ತಮ್ಮ ಜೀವ ಪಣಕ್ಕಿಟ್ಟ ಇವರಿಗೆ ಇವರ ಕುಟುಂಬಕ್ಕೆ ಕನಿಷ್ಠ ಕೃತಜ್ಞತೆ ಯನ್ನು ನೀಡದ ಸರ್ಕಾರ ಇದಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೊರೊನಾ ಸೇನಾನಿಗಳಾದ ಇವರ ಸೇವೆಯನ್ನು ಗೌರವಿಸಿ ಕೂಡಲೇ ವಿಮೆ ಜಾರಿ ಮಾಡಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ AIUTUC ಯಿಂದ ಆಗ್ರಹಿಸುತ್ತೇವೆ ಎಂದವರು ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರ ವಿಶೇಷ ಸೇವೆಗೆ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಇದು ಕೊರೋನಾ ಸಂಕಟ ಕಾಲ.. ಆದರೂ ಸರ್ಕಾರದ ನಿರ್ಲಕ್ಷ್ಯ..?
ಈಗ ಸನ್ನಿವೇಶ ನಿಜಕ್ಕೂ ಗಂಭೀರ ಆಗುತ್ತಿರುವ ಹೊತ್ತಿನಲ್ಲಿ ಜನರ ಜೀವ ಉಳಿಸಲು ಹೆಣಗಾಡುತ್ತಿರುವ ವೈದ್ಯರು, ತಳಮಟ್ಟದ ಆಶಾ ಕಾರ್ಯಕರ್ತೆಯರಂತಹ, ಆಂಬ್ಯುಲೆನ್ಸ್ ಚಾಲಕರು, ಆರೋಗ್ಯ ಸಿಬ್ಬಂದಿಗಳಂತಹ ಬಡಪಾಯಿಗಳಿಗೆ ಇನ್ನು ವಿಮೆ ಭದ್ರತೆ ಇಲ್ಲ.
ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೇ ಉಲ್ಬಣವಾಗುತ್ತಿದೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಅವರನ್ನು ಭೇಟಿ ಮಾಡುವುದು ಮತ್ತಿತರ ಕಾರ್ಯಗಳಲ್ಲಿ ತೊಡಗಿದ್ದ ಯಾವುದೇ ಆರೋಗ್ಯ ವೃತ್ತಿಪರರು ಅವಘಡದಲ್ಲಿ ಸಿಲುಕಿ ಅವರು ಸಾವನ್ನಪ್ಪಿದರೆ ಅವರ ಕುಟುಂಬ ಕ್ಕೆ 50 ಲಕ್ಷ ರೂಪಾಯಿವರೆಗೆ ವಿಮಾ ಪರಿಹಾರ ನೀಡಲಾಗುವುದು. ಎನ್ನುವುದನ್ನು ಮತ್ತೆ ಜಾರಿಮಾಡಬೇಕು. ಅಂದಾಜು 22 ಲಕ್ಷ ಆರೋಗ್ಯ ಕಾರ್ಯಕರ್ತೆಯರಿಗೆ ಈ ವಿಮಾ ಸೌಕರ್ಯ ಒದಗಿಸಲಾಗುವುದು ಎಂದು ಹೇಳಲಾಗಿತ್ತು.
ಇವರೆಲ್ಲರಿಗೆ ಮಾನಸಿಕ ಧೈರ್ಯ ನೀಡಿ, ನೈತಿಕವಾಗಿ ನಮ್ಮ ಪ್ರಭುತ್ವ ಕನಿಷ್ಠ ಜವಾಬ್ದಾರಿ ಯನ್ನು ಮೆರೆಯಬೇಕು ಎಂದು ಸಂಘದ ಪ್ರಮುಖರು ಒತ್ತಾಯಿಸಿದ್ದಾರೆ.
ಕೊರೋನಾ ಒಂದನೇ ಅಲೆಯ ಸಂಧಿಕಾಲದಲ್ಲಿ 10ಕ್ಕೂ ಹೆಚ್ಚು ಆಶಾಗಳು ಜೀವ ಕಳೆದುಕೊಂಡಿದ್ದಾರೆ. ಕೇವಲ ಒಬ್ಬ ಆಶಾ ಕುಟುಂಬಕ್ಕೆ 50 ಲಕ್ಷ ಬಂದಿದೆಯಾದರೂ ಇನ್ನುಳಿದ ಕುಟುಂಬಗಳು ಆಷಾಳನ್ನು ಕಳೆದುಕೊಂಡ ದುಃಖದ ಜೊತೆ ಅವರ ಕುಟುಂಬ ಈ ವಿಮೆ ಇಲ್ಲದೆ ಸಂಕಷ್ಟದಲ್ಲಿ ಇದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಚರ್ಚಿಸಲಾಗಿದೆ. ಮನವಿ ನೀಡಲಾಗಿದೆ. ಇಲ್ಲಿಯ ವರೆಗೆ ಸ್ಪಂದನೆ ಇಲ್ಲ..ಮುಂದೆ ಸಿಗಬಹುದು ಎನ್ನುವ ನಿರೀಕ್ಷೆ ಯಲ್ಲಿರುವರು. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಹಾಗೂ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.