ಕೊರೋನಾ ಕದನ: ಶಸ್ತ್ರಗಳಿಲ್ಲದೆ ಸೈನಿಕರನ್ನು ರಣರಂಗಕ್ಕೆ ಕಳುಹಿಸಿತೇ ಸರ್ಕಾರ..? ಆಶಾ ಕಾರ್ಯಕರ್ತೆಯರ ಪರಿಸ್ಥಿತಿ ಗಮನಿಸಿದರೆ ಸರ್ಕಾರದ ನಿರ್ಲಕ್ಷ್ಯ ಗೊತ್ತಾಗುತ್ತಿದೆ.
ಬೆಂಗಳೂರು: ಕೊರೋನಾ ನಿಯಂತ್ರಣ ವಿಚಾರದಲ್ಲಿ ಶಸ್ತ್ರಗಳಿಲ್ಲದೆ ಸೈನಿಕರನ್ನು ರಣರಂಗಕ್ಕೆ ಕಳುಹಿಸಿತೇ ಸರ್ಕಾರ? ಈ ರೀತಿಯ ಪ್ರಶ್ನೆ ಉದ್ಭವವಾಗಿದೆ. ಕೋವಿಡ್-೧೯ ಎರಡನೇ ಅಲೆಯಲ್ಲಿ ಫ್ರಂಟ್ ಲೈನ್ ವಾರಿಯರ‍್ಸ್ ಆದ ನೂರಾರು ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಸೋಂಕು ತಗುಲಿದರ. ಹಲವಾರು ಆಶಾ ಕಾರ್ಯಕರ್ತೆಯರ ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಸುರಕ್ಷತೆ ಖಾತ್ರಿಪಡಿಸಿ, ಸೋಂಕಿತರಿಗೆ ಪರಿಹಾರ ಮತ್ತು ವಿಶೇಷ ಪ್ರೋತ್ಸಾಹಧನ ಒದಗಿಸಲು ಹಿಂದೇಟು ಹಾಕಿದೆ.
ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಆಶಾ ಕಾರ್ಯಕರ್ತೆಯರು ತಮ್ಮ ಸುರಕ್ಷೆ ಕುರಿತ ಬೇಡಿಕೆಗಳನ್ನು ಈಡೇರಿಸಿ ಎಂದು ಸರ್ಕಾರದ ಮುಂದೆ ಮತ್ತೊಮ್ಮೆ ಬೇಡಿಕೆ ಇಟ್ಟಿದೆ. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಶಾ ಕಾರ್ಯಕರ್ತೆಯರ ಬದುಕು-ಬವಣೆ, ಹಾಗೂ ಕರುಣಾಜನಕ ಸ್ಥಿತಿಯತ್ತ ಬೆಳಕು ಚೆಲ್ಲಿದೆ.
ಇದೇ ವೇಳೆ, ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ ಯಾದಗಿರಿ, ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ರಾಜ್ಯದಲ್ಲಿನ ವಿಷಮ ಪರಿಸ್ಥಿತಿಯಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ನೆರವಿಗೆ ಧಾವಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೊರೊನ ಎರಡನೆಯ ಅಲೆ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನೇ ಪಣವಾಗಿಟ್ಟು ಇಲಾಖೆ ನೀಡಿದ ಕೆಲಸಗಳನ್ನು ಮಾಡುತ್ತಿರುವರು. ಬಹುತೇಕ ಕಡೆಗಳಲ್ಲಿ ಇವರ ಕೈಗೆ ಆಕ್ಸಿ ಮೀಟರ್ ಕೊಟ್ಟು ಸೋಂಕಿತರನ್ನು ಪರೀಕ್ಷಿಸಲು ಕಳುಹಿಸಿರುವರು. ಎಷ್ಟೋ ಕಡೆ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಡದೆ ಶಸ್ತಾçಸ್ತಗಳಿಲ್ಲದೆ ಯುದ್ಧಕ್ಕೆ ಕಳಿಸಿದಂತಾಗಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸುಮಾರು ೨೦-೪೦ ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಅಸುರಕ್ಷತಾ ನಡುವೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಸರ್ವೆ (ವಲ್ನೆರಬಲ್ ಸರ್ವೆ), ಮಾತ್ರೆ ಹಂಚುವುದು, ಕೊವಿಡ್ ಕಿಟ್ ಹಂಚುವುದು, ಸೋಂಕಿನ ಲಕ್ಷಣ ಕಂಡಲ್ಲಿ ಪರೀಕ್ಷೆಗೆ ಕಳುಹಿಸಿರುವುದು, ಮನೆಗಳಿಗೆ ಹೋಗಿ ದಿನನಿತ್ಯ ಅವರ ಆರೋಗ್ಯದ ಮಾಹಿತಿಯನ್ನು (ಅಪ್ಡೇಟ್)ಇಲಾಖೆಗೆ ಒದಗಿಸುವುದು, ಒಂದನೆ -ಎರಡನೇ ಸಂಪರ್ಕಿತರನ್ನು ಗುರುತಿಸುವುದು ಸೇರಿದಂತೆ ವಿವಿಧ ಕಾರ್ಯದಲ್ಲಿ ತೊಡಗಿರುವರು. ಈ ಎಲ್ಲಾ ರೀತಿಯ ಇಲಾಖೆಯ ಕೆಲಸ ಮಾಡುವಾಗ ೨ನೇ ಅಲೆಯಲ್ಲಿ ಈಗಾಗಲೇ ಕಳೆದ ೧೫ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ೫ ಆಶಾಗಳು ಕೋವಿಡ್‌ಯಿಂದ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಸುಮಾರು ೧೦೦೦ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೋನಾ ಸೋಂಕಿಗೆ ಒಳಗಾಗಿರುವರು. ಇವರಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ಅಗತ್ಯವಿರುವಷ್ಟು ಸುರಕ್ಷಣಾ ಸಾಮಾಗ್ರಿಗಳನ್ನು ಒದಗಿಸಬೇಕಾಗಿದೆ. ಹಾಗೆಯೇ ಸೋಂಕಿಗೆ ಒಳಗಾದ ಕಾರ್ಯಕರ್ತೆಗೆ ಕನಿಷ್ಠ ರೂ.೨೫೦೦೦ ಸೋಂಕಿನ ತೀವ್ರತೆಗೆ ಅನುಗುಣವಾಗಿ ಪರಿಹಾರ ನೀಡಬೇಕಾಗಿದೆ ಎಂದು ಗಮನಸೆಳೆದಿದ್ದಾರೆ. ವಿವಿಧ ಕೊರೋನಾ ವಾರಿರ‍್ಸ್ ಗಳಿಗೆ ನೀಡಿದಂತೆ, ಈ ವಿಶೇಷ ಕಾರ್ಯಗಳಿಗೆ ಈ ವರ್ಷ ಮಾಸಿಕ ರೂ.೫೦೦೦ ರಂತೆ ವಿಶೇಷ ಗೌರವಧನ ಕೂಡಲೇ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪರವಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಂಕಷ್ಟದ ಈ ದಿನಗಳಲ್ಲಿ ಕಳೆದ ಎರಡು ತಿಂಗಳು ಅಂದರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ನಿಗದಿತ ಮಾಸಿಕ ಗೌರವಧನ ರೂ.೪೦೦೦ ರಂತೆ ೨ ತಿಂಗಳ ರೂ.೮೦೦೦ ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದರಿಂದ ಆಶಾ ಕಾರ್ಯಕರ್ತೆಯರು ಆರ್ಥಿಕ ಅಡಚಣೆಯನ್ನು ಅನುಭವಿಸುವಂತಾಗಿದೆ. ಜೊತೆಗೆ ಇದೇ ಸಂದರ್ಭದಲ್ಲಿ ಈ-ಸಮೀಕ್ಷೆ ಮಾಡುವಂತೆ ಒತ್ತಾಯ ಪಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಈ- ಸಮೀಕ್ಷೆ ಸದ್ಯಕ್ಕೆ ನಿಲ್ಲಿಸಬೇಕಾಗಿದೆ. ಈ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವಾರಿಯರ್ಸ್ ಬಗ್ಗೆ ಕಾಳಜಿ ಮುತುವರ್ಜಿ ವಹಿಸಬೇಕೆಂದು ಸಂಘದಿAದ ಇಲಾಖೆಯನ್ನು ಹಾಗೂ ಸರ್ಕಾರವನ್ನು ಒತ್ತಾಯಿಸುತ್ತೇವೆ. ಈ ಬಗ್ಗೆ ಇಂದು ಮಾನ್ಯ ಮುಖ್ಯ ಮಂತ್ರಿಗಳು, ಮಾನ್ಯ ಆರೋಗ್ಯ ಸಚಿವರು, ಮಾನ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನ್ಯ ಅಭಿಯಾನ ನಿರ್ದೇಶಕರು,ಎನ್ ಎಚ್ ಎಂ, ಮಾನ್ಯ ಆಶಾ ಕಾರ್ಯಕ್ರಮಾಧಿಕಾರಿಗಳು, ಬೆಂಗಳೂರು ಇವರುಗಳಿಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ರಾಜ್ಯದ ಆಶಾ ಕಾರ್ಯಕರ್ತೆಯರ ಈ ಕೆಳಗಿನ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಸೋಮಶೇಖರ್ ಯಾದಗಿರಿ ಹಾಗೂ ಡಿ.ನಾಗಲಕ್ಷ್ಮೀ ಅವರು ತಿಳಿಸಿದ್ದಾರೆ.
ಪ್ರಮುಖ ಆಶಾ ಬೇಡಿಕೆಗಳು:
- ಸೋಂಕಿಗೆ ಒಳಗಾದ ಕಾರ್ಯಕರ್ತೆಗೆ ಕನಿಷ್ಠ ರೂ. ೨೫೦೦೦ ಸೋಂಕಿನ ತೀವ್ರತೆಗೆ ಅನುಗುಣವಾಗಿ ಪರಿಹಾರ ನೀಡಬೇಕು.
- ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗ್ಲೌಸಗಳನ್ನು ನೀಡಿ ಇವರನ್ನು ರಕ್ಷಿಸಬೇಕು.
- ವಿವಿಧ ಕೊರೋನಾ ವಾರಿರ‍್ಸ್ ಗಳಿಗೆ ನೀಡಿರುವಂತೆ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ವಿಶೇಷ ಪ್ರೋತ್ಸಾಹಧನ ಮಾಸಿಕ ರೂ.೫೦೦೦ ನೀಡಬೇಕು.
- ಮಾಸಿಕ ಗೌರವಧನ ರೂ. ೪೦೦೦ಗಳನ್ನು ಕಳೆದ ತಿಂಗಳಿAದ ನೀಡಿರುವುದಿಲ್ಲ. ಕೂಡಲೇ ೨ ತಿಂಗಳ ಗೌರವಧನ ನೀಡಿ. ಕೊರೋನಾದ ಈ ಅವಧಿಯಲ್ಲಿ ತಡಮಾಡದೇ ಪ್ರತೀ ತಿಂಗಳು ನೀಡಬೇಕು.