ಕೊರೊನಾ ನಿಯಂತ್ರಣಕ್ಕೆ ಜನರ ಸಹಕಾರ ಬೇಕು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕಠಿಣ ನಿಯಮ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಓ ಸಂಬಂಧ ಸದ್ಯದಲ್ಲೇ ಸರ್ವ ಪಕ್ಷ ಸಭೆ ಕರೆಯುವ ಸುಳಿವನ್ನು ಆರೋಗ್ಯ ಸಚಿವ ಸುಧಾಕರ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೊರೊನಾ ಪ್ರಕರಣ ಬೆಂಗಳೂರಿನಲ್ಲಿ ಒಂದು ಸಾವಿರ ದಾಟಿದೆ. ಜನಸಾಮಾನ್ಯರು ಕೋವಿಡ್ ಸುರಕ್ಷತಾ ಕ್ರಮ ಪಾಲಿಸದಿದ್ದರೆ, ಆಪಾಯವಾಗುತ್ತದೆ. ಮನೆಯಲ್ಲಿರುವ ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಬೇಕು. ಯುವಜನರು ಅನಗತ್ಯವಾಗಿ ಹೊರಗೆ ಸುತ್ತಾಡಬಾರದು ಎಂದರು.
ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿಗೆ ಸರ್ಕಾರ ಹಾಗೂ ಸಾರ್ವಜನಿಕರು ಸ್ಪಂದಿಸಬೇಕು. ಯಾವುದೇ ಚಟುವಟಿಕೆಗೆ ಕೊರೊನಾ ರಿಯಾಯಿತಿ ತೋರುವುದಿಲ್ಲ. ಸರ್ಕಾರ ತನ್ನ ಇತಿಮಿತಿಯಲ್ಲಿ ನಿಯಂತ್ರಣ ಮಾಡುತ್ತಿದೆ. ಜನರಿಗೆ ಕಷ್ಟವಾಗಬಾರದೆಂದು ಹೆಚ್ಚಿನ ನಿರ್ಬಂಧ ಹೇರಿಲ್ಲ. ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರ್ವಪಕ್ಷ ಸಭೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಕೋರಲಾಗುವುದು. ಚುನಾವಣೆ ಸಮಯದಲ್ಲಿ ಇದು ಅಗತ್ಯ ಎಂದರು.
ಗಡಿಭಾಗಗಳಲ್ಲಿ ಜನರ ಮೇಲೆ ನಿಗಾ ಇರಿಸಲಾಗಿದೆ. ಎಲ್ಲ ಜಿಲ್ಲೆಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.