ಬೆಂಗಳೂರು: ಕಾಂಗ್ರೆಸ್ ಪಕ್ಷ ಇದೀಗ ಕ್ಷಣಕ್ಷಣಕ್ಕೂ ಕುತೂಹಲಕಾರಿ ಬೆಳವಣಿಗೆಗಳ ಕೇಂದ್ರಬಿಂದುವಾಗುತ್ತಿದೆ. ಮುಖ್ಯಮಂತ್ರಿ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರು ಯಾವಾಗ ಬೇಕಾದರೂ ಸಿಎಂ ಆಗಬಹುದು. ಈ ಬಗ್ಗೆ ಕುತೂಹಲಕಾರಿ ಹೇಳಿಕೆಯೊಂದು ಅವರ ಬೆಂಬಲಿಗರಿಂದ ಕೇಳಿಬಂದಿದೆ.
ಶುಕ್ರವಾರ ಡಿಕೆಶಿ ಅವರು ತಮ್ಮ ಬೆಂಬಲಿಗರ ರಹಸ್ಯ ಸಭೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ, ಅವರ ಆಪ್ತ ಶಾಸಕ ಬಾಲಕೃಷ್ಣ ಅವರು ತುರ್ತು ಶಾಸಕಾಂಗ ಪಕ್ಷ ಸಭೆ ಕರೆಯಲು ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿದ್ದರು. ಮರುದಿನ ಮತ್ತೊಬ್ಬ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರು ಹೇಳಿಕೆ ನೀಡಿ, ಡಿಸಿಎಂ ಡಿಕೆ ಶಿವಕುಮಾರ್ ಯಾವಾಗ ಬೇಕಾದರೂ ಮುಖ್ಯಮಂತ್ರಿಯಾಗಬಹುದು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಶನಿವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ರವಿಕುಮಾರ್ ಗಣಿಗ, ಡಿಕೆಶಿಯವರು ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಮನದ ಆಸೆ ಎಂದರು. ಡಿಕೆ ಶಿವಕುಮಾರ್ ಯಾವಾಗ ಬೇಕಾದರೂ ಸಿಎಂ ಆಗಬಹುದು. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಪ್ರಕಟಿಸಬೇಕು. ಸೂಕ್ತ ಸಮಯದಲ್ಲಿ ಅದು ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳಿಲ್ಲ. 140 ಶಾಸಕರೂ ಇಬ್ಬರ ಪರವಾಗಿಯೂ ಇದ್ದಾರೆ ಎಂದಿರುವ ರವಿಕುಮಾರ್, ಪ್ರಸಕ್ತ ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದಕ್ಕೆ ಪಕ್ಷದ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.




















































