ಬೆಂಗಳೂರು: ವಿಧಾನಸಭಾ ಚುನಾವಣೆಗೆ ಭರ್ಜರಿ ರಣವ್ಯೂಹ ರಚಿಸುವಲ್ಲಿ ನಿರತವಾಗಿರುವ ಕಾಂಗ್ರೆಸ್ ಫೆಬ್ರವರಿ ಮೊದಲ ಆರಂಭದಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ತಯಾರಿ ನಡೆಸಿದೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾಹಿತಿ ಹಂಚಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೊದಲ ಟಿಕೆಟ್ ಪಟ್ಟಿ ಕುರಿತಂತೆ ಫೆ.2 ರಂದು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ತಿಳಿಸಿದರು. ಈಗಾಗಲೇ ನಮ್ಮ ನಾಯಕರು ಆಕಾಂಕ್ಷಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಾವು ನಮ್ಮ ಪ್ರವಾಸ ಮುಗಿಸಿ ಚರ್ಚೆ ಮಾಡಿ ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ’ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ತಮ್ಮ ಪಕ್ಷಕ್ಕೆ ನಾಯಕರು ಬರುವವರಿದ್ದಾರೆ ಎಂಬ ಮುಖ್ಯಮಂತ್ರಿ ಹೇಳಿಕೆ ಪ್ರತಿಕ್ರಿಯಿಸಿದ ಡಿಕೆಶಿ, ತಡಮಾಡದೆ ಆದಷ್ಟು ಬೇಗ ಕರೆದುಕೊಳ್ಳಲಿ’ ಎಂದು ತಿಳಿಸಿದರು. ‘ಅಮಿತ್ ಶಾ ಅವರು ಮೊದಲು ಬೊಮ್ಮಾಯಿ ಅವರ ನೇತತ್ವದಲ್ಲಿ ರಾಜ್ಯ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು. ಆದರೆ ಈಗ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆ ಮೂಲಕ ರಾಜ್ಯ ನಾಯಕತ್ವ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನಾವು ಜನರ ಭಾವನೆ ಅರಿತು ಪ್ರಜಾಧ್ವನಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಅದಾದ ನಂತರ ಬಿಜೆಪಿಯವರು ನಾವು ಕೂಡ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರದಲ್ಲಿ ಇದ್ದರೂ ಯಾಕೆ ಮಾಡಲಿಲ್ಲ? ನಾವು ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು ಎಂದು ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಇನ್ನು ಎರಡನೇ ಗ್ಯಾರೆಂಟಿ ಯೋಜನೆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ನೆರವಾಗಲು ಮನೆಯೊಡತಿಗೆ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದೇವೆ. ಈ ಯೋಜನೆ ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲವರು ಈ ಸೌಲಭ್ಯ ಬೇಡ ಎಂದರೆ ನಾವು ಏನೂ ಮಾಡಲು ಸಾಧ್ಯವಿಲ್ಲ ‘ ಎಂದರು.



















































