ಬೆಂಗಳೂರು: ರಾಜ್ಯ ರಾಜಧಾನಿ ಇಂದು ಮತ್ತೊಮ್ಮೆ ಪ್ರತಿಭಟನೆಯ ಅಖಾಡವಾಗಿ ಪರಿಣಮಿಸಿತು. ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದು ಅದನ್ನು ಬೆಂಬಲಿಸಿ ಇತ್ತ ಕರ್ನಾಟಕದಲ್ಲೂ ಭಾರೀ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ಪ್ರದೇಶ ಕಾಂಗ್ರೆಸ್ ಕೂಡಾ ಬೆಂಬಲ ವ್ಯಕ್ತ ಪಡಿಸಿದ್ದರಿಂದ ಬೆಂಗಳೂರು ನಗರದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣಗೊಂಡಿತು.
ಕೆಪಿಸಿಸಿ ನೇತೃತ್ವದಲ್ಲಿ ಇಂದು ರೈತರಿಂದ ರಾಜಭವನ ಚಲೋ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹೋರಾಟವನ್ನು ಯಶಸ್ವಿಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದರಿಂದಾಗಿ ಕಾಂಗ್ರಸ್‌ನ ವಿವಿಧ ಬ್ಲಾಕ್‌ಗಳ ಕಾರ್ಯಕರ್ತರ ದಂಡೇ ಬೆಂಗಳೂರಿಗೆ ಲಗ್ಗೆ ಹಾಕಿತ್ತು. ಎಲ್ಲೆಲ್ಲೂ ತ್ರಿವರ್ಣ ಧ್ವಜ ರಾರಾಜಿಸಿದ ಸನ್ನಿವೇಶ ಕಂಡುಬಂತು.
ಬೆಂಗಳೂರಿನ ಚಾಲುಕ್ಯ ವೃತ್ತ, ಶೇಷಾದ್ರಿಪುರಂ, ಕಾಳಿದಾಸ ಸರ್ಕಲ್, ರೇಸ್‌ಕೋರ್ಸ್ ರಸ್ತೆ, ಮೆಜೆಸ್ಟಿಕ್ ಸಹಿತ ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರಿಂದಾಗಿ ರಾಜಧಾನಿಯ ಕೇಂದ್ರಸ್ಥಾನವನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಯಿತು. ಈ ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ ಜನರು ಹೈರಾಣಾದರೆ, ಈ ಸಂಕಟದ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸಪಡಬೇಕಾಯಿತು.