ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದದಿಂದ ಬಿಜೆಪಿ ಮಣಿಸಲು ಅಸಾಧ್ಯ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬಿಜೆಪಿ ಮಹಾ ಪ್ರಚಾರ್ ಅಭಿಯಾನದ ಭಾಗವಾಗಿ ಕೆಂಗೇರಿ ಉಪನಗರದ ಅಂತ್ಯೋದಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಯಶವಂತಪುರ ಕ್ಷೇತ್ರ ಉಪಚುನಾವಣೆಯಲ್ಲೂ ಜೆಡಿಎಸ್ ನಾಯಕರು ಕಾಂಗ್ರೆಸ್ ನೊಂದಿಗೆ ಮೈತ್ರಿ ಸಾಧಿಸಿದ್ದರು. ಇದೀಗ ಮತ್ತೆ ಅದೇ ತಂತ್ರ ಹೂಡಿದ್ದಾರೆ. ಈ ಅಪಮೈತ್ರಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಕ್ಷೇತ್ರ ಮತ್ತು ರಾಜ್ಯದಲ್ಲಿ ಮತ್ತೆ ಕಮಲ ಅರಳಲಿದೆ. ಸ್ಥಳೀಯ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರ ಬೆಂಬಲವಿದೆ. ಅವರ ಪರಿಶ್ರಮದಿಂದ ಯಶವಂತಪುರದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರ ಪಕ್ಷ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ನಿರ್ಗಮನದಿಂದ ಪಕ್ಷದ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ. ಅವರಂತ ನೂರು ನಾಯಕರ ನಿರ್ಗಮನವನ್ನು ಸಹಿಸುವ ಶಕ್ತಿ ಪಕ್ಷಕ್ಕಿದೆ. ಇವರಿಬ್ಬರ ನಿರ್ಗಮನದಿಂದ ಲಿಂಗಾಯತರ ಮತ ಹಂಚಿಹೋಗುವ ಸಂಭವವಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿದ್ದೇನೆ. ನೀರು, ಡಾಂಬರೀಕರಣ, ಗುಣಮಟ್ಟದ ಆಸ್ಪತ್ರೆ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಜನಪರ ಕಾರ್ಯಕ್ರಮ ರೂಪಿಸಲಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 25000 ಕೋಟಿ ಸಾಲ ನೀಡಲಾಗಿದೆ. ಗರಿಷ್ಠ ಐದು ಲಕ್ಷ ರೂಪಾಯಿವರೆಗೆ ಸಾಲ ಮಂಜೂರು ಮಾಡಲಾಗುತ್ತಿದೆ. ಸ್ರ್ತೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಕಾರ್ಯಕರ್ತರ ಸಹಕಾರದೊಂದಿಗೆ ಕೊರೋನಾದಂತಹ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಫುಡ್ ಕಿಟ್, ಲಸಿಕೆ ವಿತರಣೆ ಮಾಡಲಾಗಿದೆ. ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ. ಹೀಗಾಗಿ ಸಹಾನುಭೂತಿ, ಪ್ರೀತಿ, ಅನುಕಂಪ ನನ್ನ ಮೇಲಿದೆ. ಜೆಡಿಎಸ್ ಅಭ್ಯರ್ಥಿ ಮೇಲಲ್ಲ ಎಂದರು.
ಕಣ್ಣೀರು ಹಾಕುವ ಕಾರ್ಯಕ್ರಮ ಬಿಜೆಪಿ ಕಾರ್ಯಸೂಚಿಯಲ್ಲಿಲ್ಲ. ಈಗಾಗಲೇ ಕ್ಷೇತ್ರದ 493 ಬೂತುಗಳಿಗೆ ಭೇಟಿ ನೀಡಿದ್ದು, ಜನರ ಆಶೀರ್ವಾದ ದೊರಕಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಮಾತನಾಡಿ, ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲು ಮಹಾ ಪ್ರಚಾರ್ ಕಾರ್ಯಕ್ರಮ ಆಯೋಜಿಸಲಾಗಿದೆ. ಪಕ್ಷದ ಕಾರ್ಯ ಸೂಚಿ ಹಾಗೂ ಸಾಧನೆಗಳನ್ನು ಕಾರ್ಯಕರ್ತರು ಮನೆ ಮನೆ ಬಾಗಿಲಿಗೆ ಮುಟ್ಟಿಸುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಯಶವಂತಪುರ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾದ ಅನಿಲ್ ಚಳಗೇರಿ ಮಾತನಾಡಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ರಾಜಸ್ಥಾನದ ಶಾಸಕರಾದ ಅವಿನಾಶ್ ಗೆಹ್ಲೋಟ್, ಜಾರ್ಖಂಡ್ ಶಾಸಕರಾದ ಮನೀಶ್ ಜೈಸ್ವಾಲ್, ಯಶವಂತಪುರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಂಗರಾಜು ಮತ್ತಿತರರು ಉಪಸ್ಥಿತರಿದ್ದರು.
29ಕ್ಕೆ ಮೋದಿ ರೋಡ್ ಶೋ
ಇದೇ ಏ.29ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ನೈಸ್ ರೋಡ್ ಜಂಕ್ಷನ್ ಮೂಲಕ ಯಶವಂತಪುರ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ನೈಸ್ ರೋಡ್ ಜಂಕ್ಷನ್ ನಿಂದ ಸುಂಕದಕಟ್ಟೆ ವರೆಗೆ ರೋಡ್ ಶೋ ಆಯೋಜಿಸಲಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಲಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.