ಮೈಸೂರು: ಪ್ರಜಾಧ್ವನಿ ಯಾತ್ರೆ ನಂತರ ಫೆ. 3ರಿಂದ ತಾಲೂಕು ಮಟ್ಟದ ಯಾತ್ರೆ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಮೈಸೂರು ಕಾಂಗ್ರೆಸ್ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದ ಜನರ ನೋವು, ಸಂಕಷ್ಟ ಆಲಿಸಿ ಅವರ ಅಭಿಪ್ರಾಯ ಸಂಗ್ರಹಿಸಿ ಪರಿಹಾರ ನೀಡಲು ಕಾಂಗ್ರೆಸ್ ಎಲ್ಲ ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತಿದೆ. ಇದಾದ ನಂತರ ಫೆ. 3 ರಿಂದ ತಾಲೂಕು ಮಟ್ಟದ ಯಾತ್ರೆ ನಡೆಯಲಿದೆ. ನಾನು ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಾಗೂ ಸಿದ್ದರಾಮಯ್ಯನವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ನಂತರ ನಾನು ಉತ್ತರ ಕರ್ನಾಟಕ ಭಾಗಕ್ಕೆ ಹೋದರೆ, ಸಿದ್ದರಾಮಯ್ಯನವರು ದಕ್ಷಿಣ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರದ ಹಗಲುಗನಸು ಕಾಣುತ್ತಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಬಿಜೆಪಿಯವರು ಏನು ಬೇಕಾದರೂ ಹೇಳಿಕೊಳ್ಳಲಿ. ಅವರು ಮೂರೂವರೆ ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅಧಿಕಾರದಲ್ಲಿದ್ದಾಗ ತಾವೆಷ್ಟು ಸಂತೋಷದಿಂದ ಅದನ್ನು ಅನುಭವಿಸಿದೆವು ಎಂಬುದಕ್ಕಿಂತ, ಅಧಿಕಾರದಲ್ಲಿದ್ದಾಗ ಜನರನ್ನು ಎಷ್ಟು ಸಂತೋಷವಾಗಿ ಇಟ್ಟೆವು ಎಂಬುದು ಮುಖ್ಯ. ನಾವು ಹೆಚ್ಚಿನ ಪ್ರಚಾರ ಮಾಡದಿದ್ದರೂ, ದೊಡ್ಡ ನಾಯಕರನ್ನು ಕರೆಸದಿದ್ದರೂ, ನಮ್ಮ ಯಾತ್ರೆಗಳಿಗೆ ಜನ ಯಾವ ರೀತಿ ಉತ್ಸಾಹದಿಂದ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಪಕ್ಷ, ಜಾತಿ, ಧರ್ಮ ಬೇಧ ಬಿಟ್ಟು ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ’ ಎಂದರು.
ಪ್ರಧಾನಿಗಳು ಹದಿನೈದು ದಿನಕ್ಕೊಮ್ಮೆ ರಾಜ್ಯ ಪ್ರವಾಸ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಅಮಿತ್ ಶಾ ಅವರು ಆರಂಭದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಚುನಾವಣೆ ಎದುರಿಸುತ್ತೇವೆ ಎಂದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಂದರೆ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ರಾಜ್ಯದ ನಾಯಕತ್ವ ವಿಫಲವಾಗಿದೆ ಎಂಬುದು ಸಾಬೀತಾದಂತಾಯಿತು. ಮೋದಿ ಅವರು 15 ದಿನಕ್ಕೊಮ್ಮೆಯಾದರೂ ಬರಲಿ, ಏನಾದರೂ ಮಾಡಲಿ. ಅವರು ನಮ್ಮ ಜನ ಪ್ರವಾಹ, ಕೋವಿಡ್ ಸಮಯದಲ್ಲಿ ಕಷ್ಟ ಅನುಭವಿಸಿದಾಗ ಬಂದು ಸ್ಪಂದಿಸಲಿಲ್ಲ. ಇಂದು ಮತಕ್ಕಾಗಿ ಬರುತ್ತಿದ್ದಾರೆ. ಯಾರಿಗೆ ವಿಶ್ವಾಸ ನೀಡಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ರಾಜ್ಯದ ಜನ ಪ್ರಜ್ಞಾವಂತರು, ಬುದ್ಧಿವಂತರು. ರಾಜ್ಯಕ್ಕೆ ಸದೃಢ ಆಡಳಿತ ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂಬುದು ಅವರಿಗೆ ಗೊತ್ತಿದೆ’ ಎಂದರು.
ಬಿಜೆಪಿ ಹಳೇ ಮೈಸೂರು ಭಾಗದ ಮೇಲೆ ಹೆಚ್ಚು ಗಮನಹರಿಸುತ್ತಿರುವ ಹಾಗೂ ಆಪರೇಷನ್ ಕಮಲದ ಸಿದ್ಧತೆ ಕುರಿತಂತೆ, ‘ಬಿಜೆಪಿ ನಾಯಕರ ಹೇಳಿಕೆಗಳನ್ನು ನೋಡಿ. ಮಾಜಿ ಮಂತ್ರಿಗಳು ನಾವು ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಹಣ ವೆಚ್ಚ ಮಾಡಿಯಾದರೂ ನಾವು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಅವರು ಚುನಾವಣೆಗೂ ಮುನ್ನವೇ ಸೋಲು ಒಪ್ಪಿಕೊಂಡಿದ್ದು, ಅವರಿಗೆ ಅಭಿನಂದನೆಗಳು’ ಎಂದರು..