ಮಡಿಕೇರಿ: ಹಲವು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡುವ ಮೂಲಕ ಕೊಡಗಿನ ವೀರರು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಿ ನಾಡಿನ ಗಮನಸೆಳೆದಿದ್ದಾರೆ.
ಮೂರ್ನಾಡು ಸಮೀಪದ ‘ಕಾಫಿ ಕ್ಯಾಸಲ್ ಕೂರ್ಗ್’ನಲ್ಲಿ ‘ಕೊಡವರ ಹಕ್ಕೊತ್ತಾಯಗಳ’ ಕುರಿತು ವಿಚಾರ ಸಂಕಿರಣ ನಡೆಯಿತು. ಕೊಡವರ 5 ಪ್ರಧಾನ ಹಕ್ಕೋತ್ತಾಯಗಳು ಮತ್ತು ಗೌರವಾನ್ವಿತ ಗುರಿಯನ್ನು ಸಾಧಿಸಲು ಸಿಎನ್‌ಸಿ ಆಶ್ರಯದಲ್ಲಿ ದೀರ್ಘಕಾಲದ ರಾಜಕೀಯ, ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಆಂದೋಲನಕ್ಕೆ ಸಂಕಲ್ಪಿಸಿ ನಿರ್ಣಯ ಅಂಗೀಕರಿಸಲಾಯಿತು.
ಖ್ಯಾತ ಕಾನೂನು ಪರಿಣಿತರು ಮತ್ತು ಸಂವಿಧಾನ ತಜ್ಞರು, ಹೆಸರಾಂತ ನ್ಯಾಯಾವಾದಿಗೆ ‘ಕೊಡವ ರತ್ನ’ ಬಿರುದು ನೀಡಿ ಸನ್ಮಾನಿಸಲಾಯಿತು. ಹಾಗೂ ಶ್ರೇಷ್ಠ ಸಂಸದಿಯ ಪಟುವಿಗೆ ‘ಕೊಡವ ರತ್ನ’ ಬಿರುದು ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.
‘ಕೊಡವ ರತ್ನ’ ಸನ್ಮಾನಿತರು :ಮಾಜಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ, ಇವರು ಕೊಡವರ ಎಸ್. ಟಿ. ಟ್ಯಾಗ್ ಮತ್ತು ಬಂದೂಕು ವಿನಾಯತಿ ಹಕ್ಕಿನ ಕುರಿತು ಸಿ ಎನ್ ಸಿ ಪರವಾಗಿ ಪರಿಣಾಮಕಾರಿಯಾಗಿ ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾರೆ. ಅವರ ಸೇವೆಯನ್ನು ಶ್ಲಾಘಿಸಿ ‘ಕೊಡವ ರತ್ನ’ ಬಿರುದು ನೀಡಿ ಸನ್ಮಾನಿಸಲಾಯಿತು.

‘ಕೊಡವ ರತ್ನ’ ಗೌರವಾರ್ಪಣೆಗೆ ಭಾಜನರಾದವರು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್. ಇವರು 2016 ರ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಮೂಲಕ ಕೊಡವ ತಕ್ಕನ್ನು 8 ನೇ ಶೆಡ್ಯೂಲ್‍ಗೆ ಸೇರಿಸುವ ಸಫಲ ಪ್ರಯತ್ನ ನಡೆಸಿದ್ದಾರೆ. 2019 ರಲ್ಲಿ ಎಸ್ ಟಿ ಕಾನ್ಸ್ಟಿಟ್ಯೂಷನ್ ಎಮೆಂಡ್‍ಮೆಂಟ್ ಚರ್ಚೆಯ ಸಂಧರ್ಭ ಕೊಡವರನ್ನು ಎಸ್ ಟಿ. ಪಟ್ಟಿಗೆ ಸೇರಿಸಬೇಕೆಂಬ ವಿಚಾರವನ್ನು ಪಾರ್ಲಿಮೆಂಟ್‍ನಲ್ಲಿ ದಾಖಲಿಸಿದ್ದಾರೆ. ಕೊಡವರ ಬಂದೂಕು ಹಕ್ಕು ವಿನಾಯತಿಯು ಕೇವಲ 10 ವರ್ಷಕ್ಕೆ ಸೀಮಿತಗೊಳ್ಳದೆ ಮುಂದುವರಿಯಬೇಕೆಂದು ‘ಆಮ್ರ್ಸ್ ಎಮೆಂಡ್‍ಮೆಂಟ್’ ಕಾಯ್ದೆ ಚರ್ಚೆ ಸಂಬಂಧ 2019 ರಲ್ಲಿ ಪಾರ್ಲಿಮೆಂಟಿನಲ್ಲಿ ಪ್ರತಿಪಾದಿಸಿದ್ದಾರೆ ಮತ್ತು 2020 ರಲ್ಲಿ ಪ್ರತ್ಯೆಕ ಕೊಡವ ಅಭಿವೃದ್ಧಿ ಪರಿಷತ್ತು ಸ್ಥಾಪಿಸಬೇಕೆಂದು ಕರ್ನಾಟಕ ವಿಧಾನಪರಿಷತ್‍ನಲ್ಲಿ ಪ್ರಸ್ಥಾಪಿಸಿದ್ದಾರೆ. ಅವರ ಅಪರಿಮಿತ ಪ್ರೀತಿ ಕಾಳಜಿಯನ್ನು ಪರಿಗಣಿಸಿ ಶ್ರೀಯುತರಿಗೆ ‘ಕೊಡವ ರತ್ನ’ ಬಿರುದು ನೀಡಿ ಗೌರವಿಸಲಾಗಿದೆ.
ವಕೀಲ ಲಕ್ಕವಳ್ಳಿ ಮಂಜುನಾಥ್, ಡಾ|| ಪರದಂಡ ಸಹಿತ ಹಲವು ಗಣ್ಯರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ವಿಚಾರಗೋಷ್ಠಿಯಲ್ಲಿ ಪ್ರಮುಖ ಹಕ್ಕೊತ್ತಾಯಗಳ ಸಾಧನೆಗಾಗಿ ಸಿಎನ್‍ಸಿ ಆಶ್ರಯದಲ್ಲಿ ನಡೆಯುತ್ತಿರುವ ದೀರ್ಘಕಾಲದ ರಾಜಕೀಯ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹೋರಾಟ ಮತ್ತು ಅದರ ಯಶಸ್ವಿಗಾಗಿ ಕೈಜೋಡಿಸುವ ದೃಢ ಸಂಕಲ್ಪದ ಭಾಗವಾಗಿ ಮಹತ್ವದ ನಿರ್ಣಯ ಅಂಗೀಕರಿಸಲಾಯಿತು.
- ಕೊಡವ ಲ್ಯಾಂಡ್ ಸ್ವಾಯತ್ತತೆ ಮತ್ತು ಕೊಡವರ ಆಂತರಿಕ-ರಾಜಕೀಯ ಸ್ವಯಂನಿರ್ಣಯ ಹಕ್ಕು. (ಭಾರತದ ಸಾರ್ವಭೌಮತ್ವದಡಿಯಲ್ಲಿ ಕರ್ನಾಟಕದ ಅಖಂಡತೆಯಡಿಯಲ್ಲಿ ಕೊಡವರ 45 ಪ್ರಾಚೀನ ಪಾರಂಪರಿಕ ನಾಡುಗಳನ್ನು ಡಾರ್ಜಲಿಂಗ್, ಗೂರ್ಖಾಲ್ಯಾಂಡ್, ಲಡಾಖ್, ಬುದ್ದಿಸ್ಟ್, ಅಟೋನಮಸ್ ಕೌನ್ಸಿಲ್, ಈಶಾನ್ಯ ಭಾರತದ 8 ರಾಜ್ಯಗಳಲ್ಲಿನ 10 ಸ್ವಾಯತ್ತ ಪರಿಷತ್ತುಗಳು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ಏಜೆನ್ಸಿ ಮತ್ತು ಗೋದಾವರಿ ಹಿಲ್‍ಟ್ರ್ಯಾಕ್ಟ್ ಮಾದರಿಯಲ್ಲೇ ಸಂವಿಧಾನದ 371 ಮತ್ತು 6ನೇ ಶೆಡ್ಯೂಲ್ ಪ್ರಕಾರ ಕೊಡವರ ಸಾಂಪ್ರದಾಯಿಕ ಆವಾಸ ಸ್ಥಾನವನ್ನು ಕೊಡವರ ಸ್ವಯಂ- ಶಾಸನದ ಜನ್ಮ ಭೂಮಿ ಎಂದು ಘೋಷಿಸಬೇಕು.)
- ಅತ್ಯಂತ ಪ್ರಾಚೀನ ಆದೀಮ ಸಂಜಾತ ಮತ್ತು ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿಯಂತೆ ಎಸ್ ಟಿ ಪಟ್ಟಿಗೆ ಸೇರಿಸಬೇಕು.
- ಇಂಡಿಯನ್ ಆಮ್ರ್ಸ ಆ್ಯಕ್ಟ್‍ನಲ್ಲಿ ಭದ್ರತೆ ಪಡೆದಿರುವ ಕೊಡವ ಬುಡ್ಡಕಟ್ಟು ಕುಲದ ಸಾಂಪ್ರಾದಾಯಿಕ ಕಾಯಿದೆಯಲ್ಲಿನ ಜನಪದಿಯ ‘ಸಂಸ್ಕಾರ’ವಾದ ಬಂದೂಕು ವಿನಾಯತಿ ಹಕ್ಕು ಅಬಾಧಿತವಾಗಿ ಮುಂದುವರಿಯಬೇಕು ಮತ್ತು ಇದಕ್ಕೆ ಯಾವುದೇ ಕಾಲಮಿತಿ ಹೇರದೆ ಸೂರ್ಯ-ಚಂದ್ರ ಇರುವಲ್ಲಿಯವರೆಗೆ ಮುಂದುವರಿಯಬೇಕು. ಹಾಗೂ ಏಕಗವಾಕ್ಷಿ ಯೋಜನೆಯಡಿ ಕೋವಿ ವಿನಾಯಿತಿ ಪತ್ರ ಯಾವುದೇ ಅಡ್ಡಿ ಆತಂಕ ವಿಲ್ಲದೆ ಫಲಾನುಭವಿ ಕೊಡವ-ಕೊಡವತಿಯರಿಗೆ ದೊರಕಬೇಕು. ಈ ವಿಶೇಷ ಹಕ್ಕು ಕೊಡಗು ಡಿಸ್ಟ್ರಿಕ್ಟ್ ಆಮ್ರ್ಸ್ ಆ್ಯಕ್ಟ್, ಕರ್ನಾಟಕ ಆಮ್ರ್ಸ್ ಆ್ಯಕ್ಟ್ ಆಗಿರದೆ, ಇಂಡಿಯನ್ ಆಮ್ರ್ಸ್ ಆ್ಯಕ್ಟ್ ಆಗಿರುವುದರಿಂದ ಜಿಲ್ಲಾಡಳಿತದ ಕೆಲಸ ಕೇವಲ ವಿನಾಯಿತಿ ಪತ್ರ ಆಕಾಂಕ್ಷಿ ಫಲಾನುಭವಿಗಳು ಕೊಡವ ಸಮುದಾಯಕ್ಕೆ ಸೇರಿದವರೇ ಅಥವಾ ಇಲ್ಲವೆ ಎಂಬುದನ್ನು ಗುರುತಿಸುವುದಷ್ಟೇ ಜಿಲ್ಲಾಡಳಿತದ ಕೆಲಸವಾಗಬೇಕಾಗಿದೆ.
- ಶ್ರೀಮಂತವು, ಸಮೃದವು, ಮತ್ತು ಅಭಿಜಾತವು ಆದ ಕೊಡವ ಬುಡ್ಡಕಟ್ಟು ಕುಲದ ಆದಿಮ ಸಂಜಾತ ಭಾಷೆಯಾದ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು.
- ಶೋಭಾಯಮಾನವು, ನಯನ ಮನೋಹರವು, ಪ್ರಾಚೀನವು ಆದ ಕೊಡವ ಸಾಂಸ್ಕ್ರತಿಕ ಪರಂಪರೆಯನ್ನು ವಿಶ್ವಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು.
ಮೇಲ್ಕಂಡ ಎಲ್ಲಾ ಹಕ್ಕೊತ್ತಾಯಗಳು ಭಾರತ ಸಂವಿಧಾನದ 51(ಎಫ್) ವಿಧಿಯಡಿಯಲ್ಲಿ ಬರಲಿದ್ದು, ಸಂವಿಧಾನದ 6 ಮೂಲಭೂತ ಹಕ್ಕುಗಳಲ್ಲಿ ಸಂವಿಧಾನಿಕ ಪರಿಹಾರವು ಕೂಡ ಅಡಗಿರುವುದರಿಂದ ನಮ್ಮ ಶಾಸನಬದ್ಧ ಹಕ್ಕೊತ್ತಾಯವನ್ನು ಒಡನೆ ಪರಿಗಣಿಸಬೇಕು.
ಈ ಸಂಬಂಧ ಭಾರತ ಒಕ್ಕೂಟ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಕೊಡವರ ಈ ಶಾಸನಬದ್ಧ ಬೇಡಿಕೆಯನ್ನು ಪರಿಗಣಿಸಲು ಸಂವಿಧಾನ ತಿದ್ದುಪಡಿ ಕಸರತ್ತಿಗೆ ಮುಂದಾಗುವುದರ ಮೂಲಕ ಶಾಶ್ವತ ರಾಜಕೀಯ ಪರಿಹಾರ ಮತ್ತು ದೀರ್ಘಕಾಲ ಬಾಳಲಿರುವ ಸಂವಿಧಾನಿಕ ಭದ್ರತೆಯನ್ನು ಕಲ್ಪಿಸುವುದರ ಮೂಲಕ ಕೊಡವರ ಬಹುಕಾಲದ ಆಶೋತ್ತರವನ್ನ ಪುರಸ್ಕರಿಸಬೇಕೆಂದು ನಿರ್ಣಯ ಅಂಗೀಕರಿಸಲಾಯಿತು.
ಶ್ರೇಷ್ಟ ಸಂವಿಧಾನವೇ ಕೊಡವರಿಗೆ ಪವಿತ್ರ ಗ್ರಂಥ ಮತ್ತು ಗುರುಪೀಠ ಶ್ರೇಷ್ಠ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರೇ ಕೊಡವರಿಗೆ ಜಗದ್ಗುರು
ಸಂವಿಧಾನದ ಎಸ್‍ಟಿ ಪಟ್ಟಿಯಡಿಯಲ್ಲಿ ನಾವು ಸೇರುವ ಮೂಲಕ ಕೊಡವರು ಸರ್ವಾಂಗೀಣ ಸಬಲೀಕರಣವನ್ನು ಕಾಣಬಹುದಾಗಿದೆ.
ಪ್ರತಿಯೊಬ್ಬ ಕೊಡವರು ಸಂವಿಧಾನವನ್ನು ಅರಿತುಕೊಂಡರೆ ಮತ್ತು ಓದುವುದರ ಮೂಲಕ ಜ್ಞಾನ ಪಡೆದುಕೊಂಡರೆ ನಮ್ಮ ಏಳಿಗೆಯ ಕನಸು ನನಸಾಗಲಿದೆ. ಸಂವಿಧಾನವೇ ಜಾಗತಿಕ ಸಹೋದರತ್ವ, ವಿಶ್ವ ಶಾಂತಿಯನ್ನು ಕಾಪಾಡಲಿವೆ. ಸಂವಿಧಾನವೇ ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲಿದೆ. ಸಂವಿಧಾನವೇ ಕೊಡವರು ಸೇರಿದಂತೆ ಅನೇಕತೆಯ ಭಾರತದ ವೈವಿದ್ಯಮಯ ಜನಾಂಗೀಯ ಹೆಗ್ಗುರುತು ಮತ್ತು ಅತೀ ಸಣ್ಣ ಸಮುದಾಯಗಳನ್ನು ಕೂಡ ಸ್ಥಿರವಾಗಿ ಜೋಪಾನ ಮಾಡುವುದರ ಮೂಲಕ ಸಮೃದ್ಧಿಗೊಳಿಸಲಿದೆ. ಆದ್ದರಿಂದ ಅತ್ತಿತ್ತ ವಿಚಲಿತರಾಗದೆ ಸಂವಿಧಾನವನ್ನು ಮಾತ್ರ ಕೊಡವರು ನಂಬಬೇಕು. ಸಂವಿಧಾನವನ್ನು ಕೊಡವರು ನಂಬಿ ನಡೆದರೆ ನಮ್ಮ ಭವಿಷ್ಯ ಅತ್ಯಂತ ಉಜ್ವಲವಾಗಲಿದೆಯೆಂದು ನಿರ್ಣಯ ಅಂಗೀಕರಿಸಲಾಯಿತು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಪ್ರಮುಖರು ತಿಳಿಸಿದ್ದಾರೆ.