ಬೆಂಗಳೂರು: ರಾಜ್ಯ ನಿರ್ಮಾಣ ಕೇಂದ್ರಕ್ಕೆ ನಿಯಮಬಾಹಿರ ನೇಮಕ, ಕೆಆರ್‌ಐಡಿಎಲ್- ನಿರ್ಮಿತಿ ಕೇಂದ್ರಗಳ ಅಕ್ರಮ, ಜಿಂದಾಲ್ ಸಹಿತ ನಿಯಮ ಬಾಹಿರ ಕ್ರಮಗಳ ಮೂಲಕ ಕೆಟ್ಟ ಪರಂಪರೆಯನ್ನು ಪ್ರೋತ್ಸಾಹಿಸುತ್ತಿರುವ ರಾಜ್ಯ ಸರ್ಕಾರ, ಇದೀಗ ಸಹಕಾರ ಸಂಘಗಳ ಚುನಾವಣೆ ವಿಚಾರದಲ್ಲೂ ತಪ್ಪು ಹೆಜ್ಜೆ ಇಡಲಿದೆಯೇ?ಇಂಥದ್ದೊಂದು ಅನುಮಾನವನ್ನು ರಾಜಕೀಯ ವಿಷ್ಲೇಷಕ ರಮೇಶ್ ಬಾಬು ವ್ಯಕ್ತಪಡಿಸಿದ್ದಾರೆ.
ಸಹಕಾರ ಸಂಘಗಳ ಆಡಳಿತ ಮಂಡಳಿಯ ಅವಧಿ ವಿಸ್ತರಣೆಗೆ ಅವಕಾಶ ನೀಡುವ ಕಸರತ್ತಿನ ಬಗ್ಗೆ ಸುಳಿವು ನೀಡಿರುವ ಮಾಜಿ ಶಾಸಕ ರಮೇಶ್ ಬಾಬು, ಒಂದು ವೇಳೆ ಒತ್ತಡಕ್ಕೆ ಮಣಿದು ಸರ್ಕಾರವು ತರಾತುರಿಯ ನಿರ್ಧಾರ ಕೈಗೊಂಡರೆ ಮುಂದಾಗಬಹುದಾದ ಕಾನೂನು ಸಂಕಷ್ಟದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಕೆಪಿಸಿಸಿ ವಕ್ತಾರರೂ ಆಗಿರುವ ರಮೇಶ್ ಬಾಬು ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ. ಸಹಕಾರ ಸಂಘಗಳ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಸಹಕಾರ ಸಂಘಗಳ ಆಡಳಿತ ಮಂಡಳಿಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಯ ಅವಕಾಶ ಕೋರಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಶಿಫಾರಸ್ಸನ್ನು ಪರಿಗಣಿಸಬಾರದು ಎಂದು ಅವರು ಸಲಹೆ ಮಾಡಿದ್ದಾರೆ. ಈ ಶಿಫಾರಸ್ಸು ಸಚಿವರಿಗೆ, ಶಾಸಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವೇ ಹೊರತು ಸಾರ್ವಜನಿಕ ಹಿತಾಸಕ್ತಿಯನ್ನು ಈ ಶಿಫಾರಸು ಹೊಂದಿಲ್ಲ ಎಂದವರು ವಿಷ್ಲೇಷಿಸಿದ್ದಾರೆ.
ಸಿಎಂಗೆ ರಮೇಶ್ ಬಾಬು ಬರೆದಿರುವ ಪತ್ರ ಹೀಗಿದೆ:
ರಾಜ್ಯ ಸರ್ಕಾರಗಳು ಸಹಕಾರ ಸಂಘಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದೆಂಬ ಕಾರಣಕ್ಕಾಗಿ ಭಾರತದ ಸಂವಿಧಾನದ 97 ನೇ ತಿದ್ದುಪಡಿಯ ಮೂಲಕ ಸಹಕಾರ ಸಂಘಗಳಿಗೆ ಹೆಚ್ಚು ಶಕ್ತಿಯನ್ನು ನೀಡಲಾಗಿದ್ದು, ಮುಕ್ತ ಹಾಗೂ ನಿಸ್ಪಕ್ಷಪಾತವಾದ ಚುನಾವಣೆಯನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಸಹಕಾರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಕರ್ನಾಟಕ ಸಹಕಾರ ಕಾಯಿದೆ 1959 ಕಲಂ 127ಎ ಅನ್ವಯ ಸಾರ್ವಜನಿಕ ಸೇವಕರಾಗಿರುತ್ತಾರೆ. ಸಹಕಾರ ಸಂಘಗಳ ನಿರ್ದೇಶಕರು ಅಥವಾ ಆಡಳಿತ ಮಂಡಳಿ ಪ್ರಭಾವ ಬೀರಿ ಅಥವಾ ಯಾವುದೇ ಕಾರಣ ನೀಡಿ ಚುನಾವಣೆಗಳನ್ನು ತಡೆಯುವುದಾಗಲಿ, ಮುಂದೂಡುವುದಾಗಲಿ ಅಥವಾ ಅಕ್ರಮ ಆಯ್ಕೆಗೆ ಅವಕಾಶ ನೀಡಬಾರದೆಂದು ಸಂವಿಧಾನದ ತಿದ್ದುಪಡಿಗೆ ಅನುಗುಣವಾಗಿ ಪ್ರತಿ ರಾಜ್ಯದಲ್ಲಿ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರಚಿಸಲಾಗಿದೆ. ನಿಗದಿತ ಸಮಯದಲ್ಲಿ ಸಹಕಾರ ಸಂಘಗಳು ಚುನಾವಣೆ ನಡೆಸದೇ ಹೋದರೆ, ಚುನಾವಣಾ ಪ್ರಾಧಿಕಾರವು ಅಂತಹ ಸಹಕಾರ ಸಂಘಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
ಸಹಕಾರ ಸಂಘಗಳ ನಿರ್ದೇಶಕರ ಅವಧಿಯು 5 ವರ್ಷವಾಗಿರುತ್ತದೆ. ಸಹಕಾರಿ ಕಾಯಿದೆ ಕಲಂ 18ಎ ಅನ್ವಯ ಒಂದು ಸಹಕಾರಿ ಸಂಘದ ಸದಸ್ಯತ್ವ ಯಾವ ಯಾವ ಸಂದರ್ಭಗಳಲ್ಲಿ ತೆರವುಗೊಳ್ಳುತ್ತದೆ ಎಂದು ತಿಳಿಸಲಾಗಿದೆ. ಅದೇ ರೀತಿ ಒಂದು ಸಹಕಾರ ಸಂಘದ ನಿರ್ದೇಶಕ ಯಾವ ಯಾವ ಸಂದರ್ಭಗಳಲ್ಲಿ ನಿರ್ದೇಶಕ ಸ್ಥಾನದಿಂದ ಅನರ್ಹಗೊಳ್ಳುತ್ತಾನೆ ಎಂದು ಸಹಕಾರಿ ಕಾಯ್ದೆಯಲ್ಲಿ ತಿಳಿಸಲಾಗಿದೆ. ಸಹಕಾರಿ ವ್ಯವಸ್ಥೆಯಲ್ಲಿ ಪ್ರಾಥಮಿಕ ಸಹಕಾರ ಸಂಘದಿಂದ ಜಿಲ್ಲಾ ಮಟ್ಟದ ಸಹಕಾರಿ ಸಂಘಗಳಿಗೆ ಹಾಗೂ ರಾಜ್ಯ ಮಟ್ಟದ ಸಹಕಾರಿ ಸಂಘಗಳಿಗೆ ಆಯ್ಕೆಯಾದವರ ಅವಧಿ 5 ವರ್ಷ ಇರುತ್ತದೆ. ಒಂದು ವೇಳೆ ಜಿಲ್ಲಾ ಮಟ್ಟ ಅಥವಾ ರಾಜ್ಯ ಮಟ್ಟದ ಸಹಕಾರಿ ಸಂಘಗಳಿಗೆ ಆಯ್ಕೆಯಾದ ನಿರ್ದೇಶಕರು, ಪ್ರಾಥಮಿಕ ಸಹಕಾರ ಸಂಘದಲ್ಲಿ ತಮ್ಮ ನಿರ್ದೇಶಕ ಸ್ಥಾನವನ್ನು ಕಳೆದುಕೊಂಡರೆ, ಸ್ವಾಭಾವಿಕವಾಗಿ ಅವರು ಪ್ರತಿನಿಧಿಸುವ ಜಿಲ್ಲಾ ಅಥವಾ ರಾಜ್ಯ ಮಟ್ಟದ ಸಹಕಾರ ಸಂಘಗಳಲ್ಲೂ ತಮ್ಮ ನಿರ್ದೇಶಕ ಸ್ಥಾನ ಕಳೆದುಕೊಳ್ಳುತ್ತಾರೆ.
ಕರ್ನಾಟಕ ರಾಜ್ಯದ ಸಚಿವ ಸಂಪುಟದಲ್ಲಿರುವ ಒಬ್ಬ ಸಚಿವರು ಹಾಗೂ ಕೆಲವು ಶಾಸಕರು ರಾಜ್ಯ ಮಟ್ಟದ ಸಹಕಾರ ಸಂಘಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕುಗಳಲ್ಲಿ ನಿರ್ದೇಶಕರು ಮತ್ತು ಪದಾಧಿಕಾರಿಗಳಾಗಿರುತ್ತಾರೆ. ರಾಜ್ಯದಲ್ಲಿರುವ ಒಟ್ಟಾರೆ ಸಹಕಾರ ಸಂಘಗಳ ಶೇಕಡ 10ರಷ್ಟು ಸಹಕಾರ ಸಂಘಗಳು ಕೋವಿಡ್ ಮತ್ತು ಇತರೆ ಕಾರಣಗಳಿಗಾಗಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಿರುವುದಿಲ್ಲ. ಈಗಿನ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ಅವಧಿ ಪೂರೈಸಿದ ಸಹಕಾರ ಸಂಘಗಳ ಆಡಳಿತ ಮಂಡಳಿಯ ಅವಧಿಯನ್ನು ಮುಂದೂಡಲು ಅವಕಾಶ ಇರುವುದಿಲ್ಲ. ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅವಧಿ ಮೀರಿದ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ಕೋವಿಡ್ ಪ್ರಕರಣವನ್ನು ಹೊರತುಪಡಿಸಿ ಇತರೆ ಪ್ರಕರಣಗಳಲ್ಲಿ ನಿಗದಿತ ಸಮಯದಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಸದರಿ ಸಾಲಿನ ಆಡಳಿತ ಮಂಡಳಿ/ ನಿರ್ದೇಶಕ ಮಂಡಳಿ ವಿಫಲವಾದಲ್ಲಿ, ಅಂತಹ ನಿರ್ದೇಶಕರು ಕಾನೂನಿನ ಅನ್ವಯ ಮುಂದಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ದಿಸಲು ಅನರ್ಹರಾಗುತ್ತಾರೆ. ಚುನಾವಣಾ ಪ್ರಾಧಿಕಾರವು ಚುನಾವಣೆಗೆ ಬಾಕಿಯಿರುವ ಸಹಕಾರ ಸಂಘಗಳನ್ನು ತನ್ನ ವ್ಯಾಪ್ತಿಗೆ ಪಡೆದುಕೊಂಡು, ಚುನಾವಣಾ ಅಧಿಕಾರಿಗಳನ್ನು ನೇಮಿಸುವುದರ ಮೂಲಕ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿಯಮಾನುಸಾರ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗುತ್ತದೆ.
ಶಾಸನಬದ್ಧವಾಗಿ ರಾಜ್ಯ ಸರ್ಕಾರವು ಅವಧಿ ಪೂರೈಸಿದ ಸಹಕಾರ ಸಂಘಗಳ ಆಡಳಿತ ಮಂಡಳಿಯ ಕಾಲಾವಧಿ ವಿಸ್ತರಣೆ ಮಾಡಲು ಕಾಯಿದೆಯಲ್ಲಿ ಅವಕಾಶವಿರುವುದಿಲ್ಲ. ಆದರೆ ರಾಜ್ಯ ಸಚಿವ ಸಂಪುಟದ ಸಚಿವರಿಗೆ ಮತ್ತು ಕೆಲವು ಶಾಸಕರಿಗೆ ಸಹಾಯ ಮಾಡುವ ಕಾರಣಕ್ಕಾಗಿ ಸಹಕಾರಿ ಸಂಘಗಳ ಕಾಯಿದೆ ಕಲಂ 30ಬಿ ಅಡಿಯಲ್ಲಿ, ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ವಿನಾಯಿತಿ ನೀಡಿ, ಪ್ರಭಾವಿ ವ್ಯಕ್ತಿಗಳಿಗೆ ಸಹಾಯ ಮಾಡಲು ಸಹಕಾರ ಇಲಾಖೆಯು ತಮಗೆ ಕಡತ ಮಂಡನೆ ಮಾಡಿರುತ್ತದೆ. ಸಹಕಾರ ಸಂಘಗಳ ಕಾಯ್ದೆ ಕಲಂ 18ಎ ಗೆ ಸಂಬಂಧಪಟ್ಟಂತೆ ಕೆಲವು ಸಹಕಾರ ಸಂಘಗಳಿಗೆ ವಿನಾಯಿತಿ ನೀಡಿ, ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಹಕಾರ ಸಂಘಗಳಿಗೆ ಆಯ್ಕೆಯಾಗಿರುವ ನಿರ್ದೇಶಕರನ್ನು ಮತ್ತು ಪದಾಧಿಕಾರಿಗಳನ್ನು ರಕ್ಷಣೆ ಮಾಡಲು ಮುಂದಾಗಿದೆ. ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದ ಕೆಲವು ಪ್ರಾಥಮಿಕ ಸಹಕಾರ ಸಂಘಗಳಿಗೆ ಕಲಂ 121ರ ಅಡಿಯಲ್ಲಿ ವಿನಾಯಿತಿ ನೀಡುವಂತೆ ಸಹಕಾರ ಇಲಾಖೆಯು ಮಾನ್ಯ ಮುಖ್ಯಮಂತ್ರಿಗಳಿಗೆ ಕಡತ ಮಂಡನೆ ಮಾಡಿರುತ್ತದೆ. ಈ ಪ್ರಸ್ತಾವನೆಯು ಪ್ರಸ್ತುತ ಜಾರಿಯಲ್ಲಿರುವ ಸಹಕಾರಿ ಕಾಯಿದೆ ಮತ್ತು ನಿಯಮಗಳಿಗೆ ವಿರುದ್ಧವಾಗಿದ್ದು, ಕೆಲವು ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲು ಇಂತಹ ನಿಯಮಬಾಹಿರ ಕಡತವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಹಕಾರ ಇಲಾಖೆಯು ಸಲ್ಲಿಸಿರುತ್ತದೆ.
ಸಂವಿಧಾನದ 97ನೇ ತಿದ್ದುಪಡಿಯ ನಂತರ ರಾಜ್ಯ ಸರ್ಕಾರವು ಸಹಕಾರ ಸಂಘಗಳ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ. ಪ್ರಾಥಮಿಕ ಸಹಕಾರ ಸಂಘದ ಅವದಿ ಪೂರೈಸಿದ ಆಡಳಿತ ಮಂಡಳಿಯ ಕಾರಣಕ್ಕಾಗಿ ಯಾವುದೇ ನಿರ್ದೇಶಕ ಅಥವಾ ಪದಾಧಿಕಾರಿ, ಜಿಲ್ಲಾ ಅಥವಾ ರಾಜ್ಯ ಮಟ್ಟದ ಸಹಕಾರಿ ಸಂಘಗಳಲ್ಲಿ ನಿರ್ದೇಶಕ ಸ್ಥಾನವನ್ನು ಕಳೆದುಕೊಂಡರೆ, ನಿಯಮಾನುಸಾರ ಮರು ಆಯ್ಕೆಗೆ ಅವಕಾಶವಿರುತ್ತದೆ. ಅಲ್ಲದೇ ಸಹಕಾರಿ ಕಾಯ್ದೆ ಪ್ರಕಾರ ಚುನಾವಣೆಯಾದ ಎರಡೂವರೆ ವರ್ಷದ ನಂತರ ಆಡಳಿತ ಮಂಡಳಿಯ ಸ್ಥಾನ ಖಾಲಿಯಾದರೆ, ಅಂತಹ ಸ್ಥಾನವನ್ನು ಕೋಅಪ್ (ನೇಮಕ) ಮೂಲಕ ತುಂಬಲು ಅವಕಾಶವಿದೆ. ಕೋವಿಡ್ ನೆಪ ನೀಡಿ, ಅವಧಿ ಪೂರೈಸಿದ ಅಥವಾ ಸೂಪರ್‍ಸೀಡ್ ಆಗಿರುವ ಸಹಕಾರ ಸಂಘಗಳ ನಿರ್ದೇಶಕರು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಅಥವಾ ನಿರ್ದೇಶಕರಾಗಿ ಮುಂದುವರೆಯಲು ಸಾಧ್ಯವಿಲ್ಲ. ಸಹಕಾರಿ ಕಾಯ್ದೆ ಅನ್ವಯ ಯಾವುದೇ ಒಬ್ಬ ನಿರ್ದೇಶಕ, ತಾನು ಪ್ರತಿನಿಧಿಸುವ ಸಹಕಾರಿ ಸಂಘ ಅಥವಾ ಇತರೆ ಯಾವುದೇ ಸಹಕಾರಿ ಸಂಘದಲ್ಲಿ ಸುಸ್ತಿದಾರನಾದರೆ ತನ್ನ ನಿರ್ದೇಶಕ ಸ್ಥಾನ ಕಳೆದುಕೊಳ್ಳುತ್ತಾನೆ. ಅದೇ ರೀತಿ ಒಂದು ಸಹಕಾರ ಸಂಘ ಇನ್ನೊಂದು ಸಹಕಾರ ಸಂಘಕ್ಕೆ ಸುಸ್ತಿಯಾದಲ್ಲಿ, ನಿಗದಿತ ಸಮಯದಲ್ಲಿ ಚುನಾವಣೆ ನಡೆಸದೆ ಇದ್ದಲ್ಲಿ, ಸೂಪರ್‍ಸೀಡ್ ಆದಲ್ಲಿ ಆಡಳಿತ ಮಂಡಳಿ / ನಿರ್ದೇಶಕ ಮಂಡಳಿ ಅನರ್ಹವಾಗುತ್ತದೆ.
ಆದುದರಿಂದ ಸಹಕಾರ ಇಲಾಖೆಯ ಮೂಲಕ ಕಲಂ 121ರ ಅಡಿಯಲ್ಲಿ ಇಂತಹ ಸಹಕಾರ ಸಂಘಗಳಿಗೆ ವಿನಾಯಿತಿ ಕೋರಿ ಮತ್ತು ಕಲಂ 30ಬಿ ಅಡಿಯಲ್ಲಿ ನಿರ್ದೇಶನ ಕೋರಿ ಮಂಡಿಸಿರುವ ಪ್ರಸ್ತಾವನೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಿರಸ್ಕರಿಸಬೇಕಾಗಿ ಕೋರುತ್ತೇನೆ. ಸಹಕಾರ ಇಲಾಖೆಯು ಮಂಡಿಸಿರುವ ಕಡತವನ್ನು ಅನುಮೋದನೆ ಮಾಡಿದರೆ ರಾಜ್ಯದಲ್ಲಿ ಸಹಕಾರಿ ವಲಯಕ್ಕೆ ತೊಂದರೆಯಾಗುತ್ತದೆ ಮತ್ತು ಕೆಟ್ಟ ಪರಂಪರೆಗೆ ಅವಕಾಶವಾಗುತ್ತದೆ.