‘ಸಿಎಂ ಕುರ್ಚಿ ದಸರಾ ಅಂಬಾರಿ ಇದ್ದಂತೆ..’ ಇಲ್ಲಿ ಆನೆ ಯಾರು? ಆನೆ ಮರಿ ಯಾರು? ಸಚಿವ ಯೋಗೇಶ್ವರ್‌ರ ಒಗಟನ್ನು ಬಿಡಿಸುವವರಾರು?
ಮೈಸೂರು: ಸಿಎಂ ಯಡಿಯೂರಪ್ಪ ನಾಯಕ್ವದ ವಿರುದ್ದ ಅಸಮಾಧಾನ ಹೊರಹಾಕುತ್ತಾ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಸಚಿವ ಯೋಗೇಶ್ವರ್ ಇಂದು ಮತ್ತೊಮ್ಮೆ ಸಿಎಂ ಕುಟುಂಬದ ವಿರುದ್ದ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಇಲಾಖೆಯಲ್ಲಿ ಅನ್ಯರ ಹಸ್ತಕ್ಷೇಪ ಸರಿಯಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದ ಯೋಗೇಶ್ವರ್, ಇಂದು ಬಿಜೆಪಿ ಸರ್ಕಾರದ ವ್ಯವಸ್ಥೆಯನ್ನು ದಸರಾ ಆನೆಯ ತಾಕತ್ತಿಗೆ ಹೋಲಿಸಿ ಹೊಸ ಒಗಟನ್ನು ಜನರ ಮೂಂದಿಟ್ಟು ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಕುರ್ಚಿಯನ್ನು ಮೈಸೂರು ದಸರಾ ಅಂಬಾರಿಗೆ ಹೋಲಿಸಿದ್ದಾರೆ. ಸಿಎಂ ಹುದ್ದೆ ಅನ್ನೋದು ಮೈಸೂರು ದಸರಾ ಅಂಬಾರಿ ಹೊರುವ ಆನೆಯಿದ್ದಂತೆ. ಅದೇನು ಶಾಶ್ವತ ಅಲ್ಲ ಎಂದರು. ಸಿಎಂ ಆದವರು ಸಂವೇದಶೀಲರಾಗಿರಬೇಕು ಆದರ್ಶ ಆಲೋಚನೆ ಹೊಂದಿರಬೇಕು ಮತ್ತು ಸಮರ್ಥವಾಗಿರಬೇಕು ಎಂದವರು ಹೇಳಿದರು.
ಆನೆಯ ತೂಕ ಮಾತ್ರ ಪ್ರಾಮುಖ್ಯ ಅಗಲ್ಲ. ಕೊನೆ ತನಕ ಯಶಸ್ವಿಯಾಗಿ ಅಂಬಾರಿ ತಲುಪಿಸುವ ಆನೆಯಾಗಿರಬೇಕು ಎಂದು ಯೋಗೇಶ್ವರ್ ಒಗಟು ಒಗಟಾಗಿ ಬಿಜೆಪಿ ಸರ್ಕಾರದ ಕಾರ್ಯವೈಖರಿಯತ್ತ ಬೊಟ್ಟು ಮಾಡಿದರು.
ಸಿಎಂ ಅನ್ನೋದು ವೈಭವ, ಪ್ರೆಸ್ಟೀಜ್ ಅಲ್ಲ. ಅದು ಜನಪರ ಕಾಳಜಿ ಇರುವ ಸಂವೇದಶೀಲವಾದ ಹುದ್ದೆ ಎಂದ ಅವರು, ಅಂಬಾರಿ ಹೊರುವ ಆನೆಯನ್ನು ಆಗಾಗ ಬದಲಾಯಿಸಲಾಗುತ್ತದೆ. ಅರ್ಜುನ, ಅಭಿಮನ್ಯು, ಬಲರಾಮ ಎಲ್ಲರೂ ಅಂಬಾರಿ ಹೊತ್ತಿದ್ದಾರೆ. ಅರ್ಜುನ ಅಂಬಾರಿ ಹೊತ್ತ ಅಂತಾ ಮರಿ ಆನೆಗೆ ಅಂಬಾರಿ ಹೊರಿಸಲು ಸಾಧ್ಯವಿಲ್ಲ ಎಂದು ಎಂದು ಯೋಗೇಶ್ವರ್ ಹೇಳಿದ ಮಾತು ಅಚ್ಚರಿ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿ ಆನೆ ಯಾರು? ಆನೆ ಮರಿ ಯಾರು? ಎಂಬುದೇ ಕುತೂಹಲದ ಸಂಗತಿ.
ಯೋಗೇಶ್ವರ್ ಹೇಳಿಕೆ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಕರ್ನಾಟಕವು ಆನೆ, ಹುಲಿಗಳಿಗೆ ಹೆಸರುವಾಸಿ. ಹಾಗಾಗಿ ಸಮರ್ಥವಾಗಿ ಅಂಬಾರಿ ಹೊರುವ ಆನೆ ಖಂಡಿತ ಸಿಗುತ್ತದೆ. ಇನ್ನೇನು ದಸರಾ ಬರುತ್ತದೆ. ಅಷ್ಟರಲ್ಲಿ ಅಂಬಾರಿ ಹೊರುವ ಆನೆ ಹೈ ಕಮಾಂಡ್‌ಗೆ ಸಿಗಲಿದೆ ಎಂಬ ಅವರ ಮಾತು ಸದ್ಯವೇ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಸುಳಿವನಂತಿತ್ತು.
ಚಿತ್ರಹಿಂಸೆಯ ಅನುಭವ..
ಇದು ನನ್ನ ಸರ್ಕಾರ ಅಂತ ಅನಿಸ್ತಾ ಇಲ್ಲ. ನನಗೆ ನನಗೆ ಆಗುತ್ತಿರುವ ನೋವು, ಚಿತ್ರಹಿಂಸೆಯನ್ನು ಹೇಳುತ್ತಿದ್ದೇನೆ. ಹಾಗಂತ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾ, ಸರ್ಕಾರದಲ್ಲಿ ತನಗೆ ಉಸಿರುಗಟ್ಟಿಸುವ ವಾತಾವರಣವಿದೆ ಎಂಬುದನ್ನು ಬಹಿರಂಗಪಡಿಸಿದರು.
ನಮ್ಮಲ್ಲಿ ನಮ್ಮ ಸರ್ಕಾರ ಇದ್ದರೂ ವಿರೋಧ ಪಕ್ಷದವರ ಕೈ ಮೇಲಾಗುತ್ತಿದೆ. ಜಿ.ಪಂ ತಾ.ಪಂ ಮೀಸಲಾತಿ ಸಹಾ ಹೆಚ್.ಡಿ.ಕುಮಾರಸ್ವಾಮಿ ಹೇಳಿದ ರೀತಿ ಆಗಿದೆ. ಈ ರೀತಿ ಚಿತ್ರಹಿಂಸೆ ಸಾಕಷ್ಟು ಬಾರಿ ಆಗಿದೆ. ಅವರ ಅನುಕೂಲಕ್ಕೆ ತಕ್ಕಂತೆ ವಿಂಗಡನೆ ಮಾಡಿಕೊಂಡಿದ್ದರೆ ನಾವು ಹೇಗೆ ಸ್ಪರ್ಧೆ ಮಾಡೋದು? ಎಂದು ಯೋಗೇಶ್ವರ್ ಪ್ರಶ್ನಿಸಿದರು.
ಈ ಸರ್ಕಾರದಲ್ಲಿ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಆಗುತ್ತಿಲ್ಲ. ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರ ಜೊತೆ ಯಡಿಯೂರಪ್ಪ ಹೊಂದಾಣಿಕೆ ಸದಾ ಇದೆ. ಹಾಗಾಗಿ ರಾಜ್ಯದಲ್ಲಿ ವಿರೋಧ ಪಕ್ಷಗಳೇ ಸತ್ತು ಹೋಗಿವೆ ಎಂದವರು ವಿಶ್ಲೇಷಿಸಿದರು.
ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಕೆಲವರು ಅದನ್ನು ಅದುಮುವ ಕೆಲಸ ಮಾಡಿದ್ದಾರೆ. ಆದರೆ ನನ್ನ ಪರಿಸ್ಥಿತಿ ದೇವಸ್ಥಾನದ ಗೋಪುರದ ಅಡಿಗಲ್ಲಿನಂತೆ ಆಗಿದೆ. ಬಂದವರೆಲ್ಲಾ ಚಪ್ಪಲಿ ಬಿಟ್ಟು ಕೈ ಮುಗಿದು ಹೋಗುತ್ತಿದ್ದಾರೆ. ಯಾರಿಗೂ ನಾನು ಮಾಡಿದ ಕೆಲಸ ಕಾಣುತ್ತಿಲ್ಲ ಎಂದು ಯೋಗೇಶ್ವರ್ ನೋವನ್ನು ತೋಡಿಕೊಂಡರು.
ನಾನು ವಿಜಯೇಂದ್ರ ವಿರುದ್ದ ಮಾತಾಡಲ್ಲ. ಯಾಕೆಂದರೆ ಅವರಿಗೆ ಸರ್ಕಾರದಲ್ಲಿ ಅಧಿಕೃತ ಹುದ್ದೆ ಇಲ್ಲ ಎಂಬ ಯೋಗೇಶ್ವರ್ ಮಾತುಗಳೂ ಹಲವಾರು ಅರ್ಥವನ್ನು ಸಾರಿದಂತಿದೆ. ಸಚಿವ ಶ್ರೀರಾಮುಲು ಪಿಎ ಬಂಧನ ಬಿಡುಗಡೆ ವಿಚಾರ ಬಗ್ಗೆ ಸರಿ ತಪ್ಪು ಚರ್ಚೆಯನ್ನು ಮಾಡಲ್ಲ. ನಾನು ಏನು ಮಾತನಾಡಿದರೂ ವಿವಾದವಾಗುತ್ತದೆ. ಆದರೂ ಕೂಡಾ, ಈಗ ಆಗಿದ್ದನ್ನು ನಾನು ಒಪ್ಪಲ್ಲ. ಈ ಬಗ್ಗೆ ಕರೆದು ಕೇಳಬಹುದಿತ್ತು ಎಂದು ವಿಜಯೇಂದ್ರ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಂಗೈ ಹುಣ್ಣಿಗೆ ಕನ್ನಡಿ ಏಕೆ ? ಎಂದು ಮಾಧ್ಯಮದವರನ್ನೇ ಪ್ರಶ್ನಸಿದ ಸಚಿವ ಸಿ ಪಿ ಯೋಗೇಶ್ವರ್, ರಮೇಶ್ ಜಾರಕಿಹೋಳಿ ಅವರು ಷಡ್ಯಂತರಕ್ಕೆ ಬಲಿಯಾಗಿದ್ದಾರೆ. ಅವರಿಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ತನಿಖೆಯನ್ನು ದುರುದ್ದೇಶದಿಂದಲೇ ವಿಳಂಬ ಮಾಡಲಾಗುತ್ತಿದೆ. ಈ ನೋವು ಚಡಪಡಿಕೆ ಅವರಿಗೆ ಇದೆ. ಇದು ನನಗೂ ಗೊತ್ತಿದೆ ಎಂದರು.
ಜಾರಕಿಹೊಳಿ ಅವರು ಸಮಯಕ್ಕೆ ಕಾಯುತ್ತಿದ್ದಾರೆ. ಅವರು ಷಡ್ಯಂತರಕ್ಕೆ ಒಳಗಾಗಿದ್ದಾರೆ ಅನ್ನೋದು ಜಗಜ್ಹಾಹಿರಾಗಿದೆ ಎಂದು ಯೋಗೇಶ್ವರ್ ಹೇಳಿದಾಗ, ನಿಮ್ಮ ಪಕ್ಷದವರಿಂದಲೇ ಷಡ್ಯಂತರ ಆಗಿದೆಯಾ ಎಂದು ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಅವರ ಮೌನವೇ ಉತ್ತರವಾಗಿತ್ತು.