ಬೆಂಗಳೂರು: ಕೊರೋನಾ ಸೋಂಕು ಶರವೇಗದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದುವೆ, ಇನ್ನಿತರ ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನರು ಭಾಗಿಯಾಗುವಂತಿಲ್ಲ. ಒಳಾಂಗಣ ಸಮಾರಂಭದಲ್ಲಿ 100 ಜನ ಮೀರುವಂತಿಲ್ಲ. ಹೊರಾಂಗಣದಲ್ಲಿ 200 ಜನ ಮೀರಿವಂತಿಲ್ಲ. ಅಷ್ಟೇ ಅಲ್ಲ, ಜನರೇ ಸ್ವಯಂ ಆಗಿ ಜನತಾ ಕರ್ಫೂಗೊಳಗಾಗಿವಂತೆ ಕ್ರಮ ವಹಿಸಬೇಕಾಗಿತ್ತದೆ. ಅದರ ಜೊತೆಗೆ ಮತ್ತಷ್ಟು ಕಠಿಮ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದ್ದು ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಮಾರ್ಗೋಪಾಯ ಕಂಡುಕೊಳ್ಳುವ ಸಂಬಂಧ ಸಿಎಂ ಯಡಿಯೂರಪ್ಪ ಅವರು ಇಂದು ಬೆಳಿಗ್ಗೆ ನಡೆಸಿದ ಉನ್ನತ ಮಟ್ಟದ ಸಭೆ ಕುತೂಹಲದ ಕೇಂದ್ರಬಿಂದುವಾಯಿತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸ ‘ಕಾವೇರಿ’ಯಲ್ಲಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ಕುರಿತಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ 19 ವೈರಾಣು ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸುವ ಸಂಬಂಧ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸ್ಸು ಜಾರಿ ಸಂಬಂಧ ಸಿಎಂ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಹುತೇಕ ಅಧಿಕಾರಿಗಳು ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಯ ಹೊರತಾಗಿ ಸೋಂಕು ನಿಯಂತ್ರಣ ಕಷ್ಟಸಾಧ್ಯ ಎಂದು ಸಲಹೆ ನೀಡಿದರೆನ್ನಲಾಗಿದೆ.
ಈ ಸಭೆಯಲ್ಲಿ ಕಠಿಣ ನಿಯಮ ಜಾರಿ ಬಗ್ಗೆ ಅಧಿಕಾರಿಗಳು ಅಭಿಪ್ರಾಯ ಮಂಡಿಸಿದರು. ಮಹಾರಾಷ್ಟ ಹಾಗೂ ದೆಹಲಿಯಲ್ಲಿ ಜಾರಿಯಾಗಿರುವ ಕ್ರಮಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಧಾರ್ಮಿಕ, ಸಾಮಾಜಿಕ, ಮನರಂಜನಾ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಸಂಬಂಧ ಜನ ಸೇರುವ ಮಿತಿಯನ್ಬು ಕನಿಷ್ಠಗೊಳಿಸುವುದು, ಮದುವೆ, ಸಭೆ, ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರದಂತೆ ನಿಯಮ ಜಾರಿಗೆ ತರುವ ಸಂಬಂಧ ಈ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಆರೋಗ್ಯ ಸಚಿವ ಸುಧಾಕರ್, ನೈಟ್ ಕರ್ಫ್ಯೂ ಅಷ್ಟೇ ಸಾಲದು. ಕಠಿಣ ನಿಯಮ ಜಾರಿಯಾಗಬೇಕಿದೆ. ಅದರೊಂದಿಗೆ ಜನರೇ ಸ್ವಯಂ ಆಗಿ ಕರ್ಫ್ಯೂ ಹೇರಿಕೊಳ್ಳಬೇಕಿದೆ ಎಂದು ಹೇಳಿದರು. ಜೊತೆಗೆ, ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಕೊರತೆ ಎದುರಾಗಬಾರದೆಂಬ ಕಾರಣಕ್ಕಾಗಿ ಹೊಟೇಲ್‌ಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸುಧಾಕರ್ ವಿವರಿಸಿದರು.
ಇದನ್ನೂ ಓದಿ.. ಕೊರೋನಾ ನಿಯಂತ್ರಣ; ಸಿಎಂ ನೇತೃತ್ವದ ಸಭೆಯ ಹೈಲೈಟ್ಸ್
ಇದೇವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇಂದಿನ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು ಏ.20ರವರೆಗೆ ಪ್ರಸಕ್ತ ಇರುವ ನಿಯಮಗಳು ಜಾರಿಯಲ್ಲಿರುತ್ತದೆ ಎಂದರು. ಸರ್ವ ಪಕ್ಷ ಸಭೆಯ ನಂತರ ಕಠಿಣ ನಿಯಮ ಜಾರಿಯ ಸುಳಿವನ್ನು ಅವರು ನೀಡಿದರು.