ಬೀದರ್: ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಆರಂಭವಾಗಿದೆ. ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಬಗ್ಗೆಯೂ ಕುತೂಹಲಕಾರಿ ಚರ್ಚೆಗಳು ಸಾಗಿದೆ. ಇದೇ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ಸಿಎಂ ನಾನೇ ಎಂಬ ಬಸವರಾಜ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೇಳಲು ಅವಕಾಶವಿದೆ. ಆದರೆ, ಸಿಎಂ ಆಯ್ಕೆ ಮಾಡುವುದು ರಾಷ್ಟ್ರೀಯ ನಾಯಕರು ಹಾಗೂ ಶಾಸಕಾಂಗ ಪಕ್ಷ. ಇದನ್ನು ಯತ್ನಾಳ್ ಅವರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಇದೇ ವೇಳೆ, ತಾವು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಎಂದವರು ಸ್ಪಷ್ಟನೆ ನೀಡಿದರು. ಪಕ್ಷವು ನನ್ನಂಥ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷನಂತಹಾ ಶ್ರೇಷ್ಠ ಹುದ್ದೆಯನ್ನು ನೀಡಿದೆ. ಹಾಗಾಗಿ ನಾನು ಅಪೇಕ್ಷೆ ಪಟ್ಟು ಬರುವವನಲ್ಲ, ಕಾರ್ಯಕರ್ತನಾಗಿಯೇ ಸಂಘಟನೆ ಮಾಡುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಖರ್ಗೆಗೆ ಪಟ್ಟ ಕಟ್ಟಿ: ಕೈ ನಾಯಕರಿಗೆ ಸವಾಲ್
ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಇದೆ. ಆದರೂ ಈಗಲೇ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಸಂಗೀತ ಕುರ್ಚಿ ಶುರುವಾಗಿದೆ ಎಂದು ಲೇವಡಿ ಮಾಡಿದರು. ಸಿಎಂ ಅಭ್ಯರ್ಥಿಗಾಗಿ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಬೀದಿ ಜಗಳಕ್ಕೆ ಬದಲು ಮಲ್ಲಿಕಾರ್ಜುನ ಖರ್ಗೆ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಘೋಷಿಸಲಿ ಎಂದು ಸವಾಲು ಹಾಕಿದರು.