ದೆಹಲಿ: ಮುಂದಿನ ಸಿಎಂ ಯಾರಾಗಬಹುದು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಸಾಗಿದಾಗ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಿ.ಟಿ.ರವಿ, ಅರವಿಂದ್ ಬೆಲ್ಲದ್, ಸಹಿತ ಕೆಲವೇ ನಾಯಕರ ಕೇಳಿಬರುತ್ತಿದೆ. ಈ ಪೈಕಿ ಪ್ರಲ್ಹಾದ್ ಜೋಷಿ ಅವರು ರಾಜ್ಯ ರಾಜಕಾರಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಹಾರ್ಡ್ ಕೋರ್ ಹಿಂದೂ ಯುವ ನಾಯಕ, ಸಂಘದ ಕಟ್ಟಾಳು ಸಿ.ಟಿ.ರವಿ ಹೆಸರೇ ಮುಂಚೂಣಿಯಲ್ಲಿದೆ.
ಈ ನಡುವೆ ಸಿಎಂ ಆಗಬೇಕೆಂಬ ಹಪಹಪಿತನ ನನಗಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಮಟ್ಟದಲ್ಲಿ ಉದಯ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಮಂದಿ ಸಿ.ಟಿ.ರವಿ ಹಾಗೂ ಅರವಿಂದ್ ಬೆಲ್ಲದ್ ಹೆಸರಿನತ್ತ ಒಲವು ತೋರಿದ್ದರು. ಯೋಗಿ ರೀತಿಯಲ್ಲಿ ಕರ್ನಾಟಕವನ್ನು ಮುನ್ನಡೆಸಬೇಕಾದರೆ ಈ ಇಬ್ಬರಲ್ಲೊಬ್ಬರು ಸೂಕ್ತವೆಂದು ಕೇಸರಿ ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಾವು ಯಾವ ಸ್ಥಾನದ ನಿರೀಕ್ಷೆಯಲ್ಲೂ ಇಲ್ಲ. ವರಿಷ್ಠರ ಸೂಚನೆಯಂತೆ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಸೇನಾನಿಯಾಗಿ ಇನ್ನೇನು ಮಾಡಬೇಕೆಂದು ವರಿಷ್ಠರು ಸೂಚಿಸುತ್ತಾರೋ ಆ ಕಾರ್ಯವೇ ನನ್ನ ಆಯ್ಕೆ ಎಂದವರು ಹೇಳಿದ್ದಾರೆ.
‘ನಾನು ಸಂಘದ ಚಿಂತನೆಯುಳ್ಳ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಪಕ್ಷ ಹೇಳಿದ ಕೆಲಸ ಮಾಡೋದಷ್ಟೇ ನನ್ನ ಗುರಿ’ ಎಂದಿದ್ದಾರೆ ಸಿ.ಟಿ.ರವಿ .
ಪಕ್ಷ ಸಂಘಟನೆಗಾಗಿ ಸಚಿವ ಸ್ಥಾನ ತ್ಯಜಿಸುವಂತೆ ಸೂಚಿಸಿದಾಗ ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿ ನಾಸ್ತಿಕರ ನಾಡಲ್ಲಿ ಕಾಲವನ್ನು ಚಿಗುರಿಸಿದ ಹೆಗ್ಗಳಿಕೆ ಸಿ.ಟಿ.ರವಿ ಅವರದ್ದು, ಹಾಗಾಗಿಯೇ ತಾವು ಸಿಎಂ ಆಗಬೇಕೆಂಬುದು ಕಾರ್ಯಕರ್ತರ ಅಪೇಕ್ಷೆಯಲ್ಲವೇ ಎಂಬ ಒಂದು ಪ್ರಶ್ನೆಗೂ ತನ್ನದೇ ದಾಟಿಯಲ್ಲಿ ಪ್ರತಿಕ್ರಿಯಿಸಿರುವ ರವಿ, ಯಾವುದೇ ಹುದ್ದೆಯನ್ನೂ ನಿರ್ವಹಿಸುವ ರೀತಿಯಲ್ಲಿ ಪಕ್ಷ ಹಾಗೂ ಕಾರ್ಯಕರ್ತರು ನನ್ನನ್ನು ಬೆಳೆಸಿದ್ದಾರೆ. ಯಾವ ವಿಷಯದಲ್ಲೂ ಪಕ್ಷಕ್ಕೆ, ಸಂಘದ ಪ್ರಮುಖರಿಗೆ ನಿರಾಸೆ ಉಂಟುಮಾಡಿಲ್ಲ. ಮುಂದೆಯೂ ಹಿರಿಯರ ನಿರ್ದೇಶನದಂತೆ ನಡೆಯುತ್ತೇನೆಯೇ ಹೊರತು ಯಾವುದನ್ನೂ ಕೇಳಿ ಪಡೆಯುವುದಿಲ್ಲ ಎಂದರು.
ಪಕ್ಷ ತ್ಯಜಿಸಿ ವಾಪಸ್ ಬಂದವರಿಂದ ಬಿಜೆಪಿ ಪಾಠ ಕಲಿತಿದೆ. ಹೀಗಿರುವಾಗ ‘ಪರಿಪೂರ್ಣ ಸಂಘ’ದ ‘ಪರಿಶುದ್ದ ಕಾರ್ಯಕರ್ತರು’ ಈ ಬಾರಿ ಮುಖ್ಯಮಂತ್ರಿಯ ಆಗಬೇಕೆಂಬುದು ಕಾರ್ಯಕರ್ತರ ಒತ್ತಾಸೆಯಾಗಿದೆ. ಒಂದು ವೇಳೆ, ಸಂತೋಷ್, ದತ್ತಾಜಿಯಂತಹ ಪ್ರಮುಖರು ಹೇಳಿದರೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೂ ಅವರದ್ದೇ ಆದ ರೀತಿಯ ಪ್ರತಿಕ್ರಿಯೆ. ‘ಯಾವುದೇ ಹುದ್ದೆ ಹಾಗೂ ಸ್ಥಾನಕ್ಕಿಂತಲೂ ಪಕ್ಷವೇ ನನಗೆ ದೊಡ್ಡದು. ಪಕ್ಷದ ಉನ್ನತ ನಾಯಕರು ಯಾವುದೇ ಜವಾಬ್ದಾರಿ ನೀಡಿದರೂ ಆ ಹುದ್ದೆಯನ್ನು ಪಕ್ಷ ಹಾಗೂ ಸಂಘಟನೆಯ ಅಪೇಕ್ಷೆಯಂತೆಯೇ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ’ ಎಂದಿದ್ದಾರೆ.