ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ‘ಜನೋತ್ಸವ’ ಸಮಾರಂಭದ ಆಯೋಜಿಸಿದೆ.
ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ನಡೆಯಲಿರುವ ಈ ‘ಜನೋತ್ಸವ’ವನ್ನು ಸರ್ಕಾರದ ಹೆಸರಲ್ಲಾಗಲೀ, ಬಿಜೆಪಿಯ ಪರವಾಗಿಯಾಗಲೀ ನಡೆಸುವ ಬದಲು ಜನಸಾಮಾನ್ಯರ ಉತ್ಸವ ಎಂಬಂತೆ ಅರ್ಥಪೂರ್ಣವಾಗಿ ಆಚರಿಸಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ಈ ಸಮಾರಂಭವನ್ನು ಯಶಸ್ವಿಗೊಳಿಸಲು ಬೊಮ್ಮಾಯಿ ಅವರ ಆಪ್ತ ಸಚಿವ ಡಾ.ಸುಧಾಕರ್ ಅವರು ಟೊಂಕ ಕಟ್ಟಿ ನಿಂತಿದ್ದು ಸರಣಿ ಸಭೆಗಳನ್ನು ನಡೆಸಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಇನ್ನೊಂದೆಡೆ, ವಿಧಾನಸಭೆ ಚುನಾವಣೆಯತ್ತ ಬಿಜೆಪಿ ಚಿತ್ತ ಹರಿಸಿದ್ದು, ಅದಕ್ಕೆ ಪೂರಕ ಎಂಬಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ತಮ್ಮ ಸರ್ಕಾರದ ವತಿಯಿಂದ ಸುಮಾರು 5 ಸಾವಿರ ಕೋಟಿ ರೂಪಾಯಿ ವೆಚ್ಚದ ಹೊಸ ಯೋಜನೆಗಳನ್ನು ಘೋಷಿಸಲು ನಿರ್ಧರಿಸಿದ್ದಾರೆ. .
ಜನಸಾಮಾನ್ಯರಿಗೆ ಅನುಕೂಲವಾಗುವಂತಹಾ ಯೋಜನೆ ತಯಾರಿ ನಡೆದಿದ್ದು, ಆರೋಗ್ಯ, ಶಿಕ್ಷಣ, ಕೃಷಿ, ನಗರಾಭಿವೃದ್ಧಿ, ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಜಲಸಂಪನ್ಮೂಲ, ಇಲಾಖೆಗಳಲ್ಲಿ ಹೊಸ ಕಾರ್ಯಕ್ರಮಗಳ ಬಗ್ಗೆ ಕಾರ್ಯಯೋಜನೆ ಸಿದ್ದಪಡಿಸಿದ್ದಾರೆನ್ನಲಾಗಿದೆ.
ಈ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ಸಿಎಂ ಅವರು ‘ಜನೋತ್ಸವ’ದಲ್ಲಿ ಘೋಷಿಸಲಿದ್ದಾರೆ ಎಂದು ಮೂಲಗಳು
ತಿಳಿಸಿವೆ.



























































