ಬೆಂಗಳೂರು: ಕರ್ನಾಟಕದಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮವೊಂದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮತಾಂತರ ಎಂಬುದು ‘ನಕಲಿ’ಗಳ ಮಾಫಿಯಾ. ಇದರಿಂದ ದೇಶದ ಸಂಸ್ಕೃತಿ, ಇತಿಹಾಸ ಹಾಗೂ ಐಕ್ಯತೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತಾಂತರ ನಿಷೇಧಕ್ಕಿಂತಲೂ ಅರ್ಥಪೂರ್ಣ ಕಾನೂನು ಜಾರಿಯಾಗಬೇಕಿದೆ ಎಂಬ ಒತ್ತಾಯದ ‘ಪಂಚಜನ್ಯ’ ಮೊಳಗಿಸಲು ಕರುನಾಡಿನ ಕ್ರೈಸ್ತ ಪಾದ್ರಿಗಳ ಸಮೂಹದ ವೇದಿಕೆ ಸಜ್ಜುಗೊಂಡಿದೆ. ಈ ಸಂಬಂಧ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿತವಾಗಿದೆ.
ಬೆಂಗಳೂರಿನ ಕೆ.ಆರ್.ಪುರಂ ಬಳಿಯ ಮೌಂಟ್ ಜಿಯಾನ್ ಪೆಂಟಕೋಸ್ಟಲ್ ಚರ್ಚ್ ಆವರಣದಲ್ಲಿ ಆಗಸ್ಟ್ 22ರಂದು ‘ಮಹಾ ಸಭಾ’ ಹೆಸರಿನಲ್ಲಿ ಈ ಚಿಂತನಾ ಸಮಾವೇಶ ನಡೆಯಲಿದೆ. ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಅವರ ಮುಂದಾಳುತ್ವದಲ್ಲಿ ನಡೆಯವ ಈ ‘ಮಹಾ ಸಭಾ’ ಕಾರ್ಯಕ್ರಮದಲ್ಲಿ ಕರ್ನಾಟಕದ 600ಕ್ಕೂ ಹೆಚ್ಚು ಚರ್ಚ್‌ಗಳ ಮುಖ್ಯಸ್ಥರು, ಫಾದರ್‌ಗಳು, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ದೇಶದಲ್ಲಿ ಇದೇ ಮೊದಲ ಕಹಳೆ..!
ಅಲ್ಪಸಂಖ್ಯಾತರೆಂದು ಗುರುತಾಗಿರುವ ಕ್ರಿಶ್ಚಿಯನ್ ಸಮುದಾಯ ಹೆಸರಿನಲ್ಲಿ ಕೆಲವು ಮಾಫಿಯಾಗಳು ಅಕ್ರಮ ಕೂಟಗಳನ್ನು ನಡೆಸುತ್ತಿರುವುದು ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಅಲ್ಲಲ್ಲಿ ನಿಯಮ ಬಾಹಿರವಾಗಿ ಧಾರ್ಮಿಕ ಕೇಂದ್ರಗಳ ಸೋಗಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಕ್ರೈಸ್ರ ಧರ್ಮದ ಪವಿತ್ರ್ಯಕ್ಕೆ ಕಳಂಕ ತರುವ ಪ್ರಯತ್ನ ನಡೆಯುತ್ತವೆ. ಈ ಸಂಬಂಧ ಪ್ರತ್ಯೇಕ ಕಾನೂನು ರೂಪಿಸಬೇಕೆಂಬುದು ಬಹುಕಾಲದ ಬೇಡಿಕೆ. ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಡುವ ಉದ್ದೇಶದಿಂದ ಎಲ್ಲಾ ಚರ್ಚ್‌ಗಳ ಫಾದರ್‌ಗಳನ್ನೊಳಗೊಂಡ ಧಾರ್ಮಿಕ ಮುಖಂಡರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವನ್ನು ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ. ವರ್ಗೀಸ್ ಅವರು ಮಾಡಿದ್ದಾರೆ. ಈ ಸಂಬಂಧ ಸೋಮವಾರದ ‘ಮಹಾ ಸಭಾ’ ಬೈಠಕ್‌ನಲ್ಲಿ ‘ಇಂಡಿಯನ್ ಕ್ರಿಶ್ಚಿಯನ್ ಆ್ಯಕ್ಟ್’ ರಚನೆ ಸಂಬಂಧ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಶಾಜಿ ಟಿ. ವರ್ಗೀಸ್ ತಿಳಿಸಿದ್ದಾರೆ.
ಪ್ರಸ್ತುತ ಭಾರತದಲ್ಲಿರುವ ಬಹುತೇಕ ಕ್ರೈಸ್ತ ಸಮುದಾಯಗಳು ವಿದೇಶಗಳ ನೀತಿ-ನಿಯಮಗಳನ್ನು ಅನುಸರಿಸುತ್ತಿವೆ. ಬಹುತೇಕ ಆಚರಣೆಗಳು ವಿದೇಶಿ ಸಂಪ್ರದಾಯಕ್ಕೆ ಸೀಮಿತವಾಗಿವೆ. ಹಾಗಾಗಿ ಭಾರತದಲ್ಲಿರುವ ಕ್ರೃಸ್ತರು ಪರಿಪೂರ್ಣ ಭಾರತೀಯರೆನಿಸಲು ‘ಇಂಡಿಯನ್ ಕ್ರಿಶ್ಚಿಯನ್ ಆ್ಯಕ್ಟ್’ ಅಗತ್ಯವಿದೆ ಎಂಬುದು ಕಾನೂನು ತಜ್ಞರೂ ಆಗಿರುವ ಶಾಜಿ ಅವರ ಅಭಿಪ್ರಾಯವಾಗಿದೆ. ಹೀಗೊಂದು ವೇಳೆ ಕಾಯ್ದೆ ರೂಪುಗೊಂಡರೆ ಎಲ್ಲಾ ಚರ್ಚ್‌ಗಳೂ ಈ ಆ್ಯಕ್ಟ್ ಅಡಿ ಬರಲಿದ್ದು, ಕಾನೂನು ಬಾಹಿರ ಧಾರ್ಮಿಕ ಕೇಂದ್ರಗಳಿಗೆ ಅವಕಾಶ ಸಿಗುವುದಿಲ್ಲ ಎಂಬುದು ಇವರ ಪ್ರತಿಪಾದನೆ.
ರಾಜಕೀಯ ಪಕ್ಷಗಳಲ್ಲೂ ಸಂಚಲನ:
ಸೋಮವಾರದ ‘ಮಹಾ ಸಭಾ’ದಲ್ಲಿ ಸುಮಾರು 600 ಚರ್ಚ್‌ಗಳ ಫಾದರ್‌ಗಳು ಪಾಲ್ಗೊಳ್ಳಲಿದ್ದಾರೆ. ಕಾನೂನು ಪಂಡಿತರು, ಧರ್ಮಗುರುಗಳು, ಸಾಮಾಜಿಕ ಹೋರಾಟಗಾರರು ಕೂಡಾ ಒಂದೇ ವೇದಿಕೆಯಲ್ಲಿ ಭಾಗಿಯಾಗಿ ಚಿಂತನ-ಮಂಥನ ನಡೆಸಲಿದ್ದು, ಬಿಷಪ್ ಡೇವಿಡ್, ಪ್ರಾನ್ಸಿಸ್ ಜಾಕ್ಸನ್ ಸಹಿತ ಹಲವರು ಮಾರ್ಗದರ್ಶನ ನೀಡಲಿದ್ದಾರೆ. ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆನಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿನ ಕ್ರೈಸ್ತ ಮುಖಂಡರೂ ಈ ಸಮಾವೇಶದಲ್ಲಿ ಸಮಾಗಮವಾಗಲಿದ್ದು, ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವಂಥ ರಾಜಕೀಯ ಶಕ್ತಿಯ ಹುಡುಕಾಟದ ಪ್ರಯತ್ನವೂ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
























































