ಮಂಗಳೂರು: ಬೆಂಗಳೂರಿನಲ್ಲಿ ನಾಪತ್ತೆಯಾಗಿ ಪೋಷಕರ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.
ಬೆಂಗಳೂರಿನ ಸೋಲದೇವನಹಳ್ಳಿ ಬಳಿಯ ಕ್ರಿಟನ್ ಕುಶಾಲ್ ಅಪಾರ್ಟ್‌ಮೆಂಟ್‌ನ ನಿವಾಸಿಗಳಾಗಿದ್ದ ಮಕ್ಕಳು ಹಾಗೂ 21 ವರ್ಷ ಪ್ರಾಯದ ಯುವತಿ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು.
ಈ ಮಕ್ಕಳ ಪತ್ತೆಗಾಗಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.
ಈ ನಡುವೆ ನಾಪತ್ತೆಯಾಗಿರುವ ಮಕ್ಕಳು ಮಂಗಳೂರಿನ ಪಾಂಡೇಶ್ವರ ಬಳಿ ಪತ್ತೆಯಾಗಿದ್ದಾರೆ. ಸೋಮವಾರ ಅತ್ತಾವರ ಕೆಎಂಸಿ ಆಸ್ಪತ್ರೆ ಬಳಿ ಈ ಮಕ್ಕಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಈ ಬಗ್ಗೆ ಸುಳಿವರಿತ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆಸಿಕೊಂಡು ಊಟೋಪಚಾರ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಮಕ್ಕಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಪ್ರವಾಸ ತೆರಳುವ ಉದ್ದೇಶದಿಂದ ಮನೆಯಿಂದ ಹೊರಟಿದ್ದ ಮಕ್ಕಳು ವಾಕಿಂಗ್ ನೆಪದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ, ಪೊಲೀಸರ ಜೊತೆ ಮಾತನಾಡಿರುವ ಈ ಮಕ್ಕಳು ತಾವು ಮಂಗಳೂರಿಗೆ ಬಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮನೆಯವರು ನಮ್ಮನ್ನು ಬೇರೆ ಮಾಡೋಕೆ ನೋಡಿದ್ರು. ಅದಕ್ಕೆ ಮನೆ ಬಿಟ್ಟು ಬಂದ್ವಿ.
ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಮತ್ತೆ ಮಂಗಳೂರಿಗೆ ಬಂದ್ವಿ. ಮಂಗಳೂರಿಗೆ ಬೆಳಗ್ಗೆ ಬಸ್ ನಲಿ ಬಂದ್ವಿ ಎಂದು ಬಾಲಕಿಯೊಬ್ಬಳು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.