ಬೆಂಗಳೂರು: ಆರೆಸ್ಸೆಸ್ನದ್ದು ಕಟ್ಟುವ ಸಂಸ್ಕ ತಿಯೇ ಹೊರತು ಕೊಲ್ಲುವ ಸಂಸ್ಕೃತಿ ಮೇಲೆ ಸಂಘ ನಂಬಿಕೆ ಇಟ್ಟಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಗೌರಿ, ದಾಬೋಲ್ಕರ್ ಮಾತ್ರವಲ್ಲ, ಗಾಂಧಿ ಹತ್ಯೆಯ ಆರೋಪವನ್ನೂ ಸಂಘದ ಮೇಲೆ ಹೊರಿಸಿರುವ ಕಾಂಗ್ರೆಸ್ಸಿಗರು, ಇದೀಗ ಸಂಘದ ಬಗ್ಗೆ ಮತ್ತಷ್ಟು ಅನಗತ್ಯ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಆರೆಸ್ಸೆಸ್ ಸಂಘಟನೆಯು ಸಂಸ್ಕೃತಿ ಶಿಕ್ಷಣದ ಕೆಲಸದಿಂದ ವಿಮುಖವಾಗಿಲ್ಲ ಎಂದವರು ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಿ.ಟಿ.ರವಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ದೇಶದ ಇತಿಹಾಸಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಂಘ ಮತ್ತು ರಾಜಕೀಯ ವ್ಯವಸ್ಥೆ ಬಗ್ಗೆ ಅವರು ಮಂಡಿಸಿದ ಅಭಿಪ್ರಾಯ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ಸಂಘ ಯಾರನ್ನ ನಿಂದಿಸಲ್ಲ, ಯಾರನ್ನೂ ದೂರುವುದಿಲ್ಲ. ದೇಶಭಕ್ತಿಯ ಶಿಕ್ಷಣ ನೀಡುವ ಕಾರ್ಯಕ್ರಮಕ್ಕಷ್ಟೇ ಗಮನಕೇಂದ್ರೀಕರಿಸಿದೆ. ನಾಶದ ತತ್ವವು ಆರೆಸ್ಸೆಸ್ನದಲ್ಲ. ಹೀಗಿರುವಾಗ ಕೊಲ್ಲುವ ಸಂಸ್ಕೃತಿಯನ್ನು ಸಂಘ ಒಪ್ಪುವುದಿಲ್ಲ ಎಂದು ಟೀಕಾಕಾರರಿಗೆ ಎದಿರೇಟು ನೀಡಿದ್ದಾರೆ. ಮಹಾತ್ಮ ಗಾಂಧಿ ಹತ್ಯೆ ಆರೋಪವನ್ನು ಸಂಘದ ಮೇಲೆ ಹೊರಿಸಿದ್ದರು. ಆದರೆ ಸರ್ಕಾರ ನೇಮಕ ಮಾಡಿದ್ದ ಮೂರು ಆಯೋಗಗಳೂ ಗಾಂಧಿ ಹತ್ಯೆಗೂ ಆರ್ಎಸ್ಎಸ್ಗೂ ಸಂಬಂಧ ಇಲ್ಲ ಎಂದು ವರದಿ ಕೊಟ್ಟಿದೆ. ಆದರೂ ಗಾಂಧಿಯನ್ನು ಕೊಂದಿದ್ದು ಆರ್ಎಸ್ಎಸ್ ಎಂದು ಈಗಲೂ ಸುಳ್ಳು ಹೇಳುತ್ತಾರೆ ಎಂದವರು ಅಸಮಾಧಾನ ಹೊರಹಾಕಿದ್ದಾರೆ.
ಆರೆಸ್ಸೆಸ್ಸನ್ನು ಕೋಮುವಾದಿ ಎಂದು ಜರಿಯುತ್ತಿರುವ ಪ್ರತಿಪಕ್ಷಗಳ ಆರೋಪಗಳಿಗೂ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ನಮ್ಮ ದೇಶದಲ್ಲಿ ಹಿಂದೂ ರಾಜನ ನೆರವಿನಿಂದಲೇ ಮೊದಲ ಬಾರಿ ಮಸೀದಿ ನಿರ್ಮಾಣವಾಗಿದ್ದು, ಮುಸ್ಲಿಮರಿಗೆ ನಮಾಜ್ ಮಾಡಲು ಮಸೀದಿಯನ್ನೇ ಕಟ್ಟಿಕೊಟ್ಟ ಇತಿಹಾಸ ನಮ್ಮ ದೇಶಕ್ಕಿದೆ. ಆ ಸಂಸ್ಕೃತಿಯನ್ನು ಸಂಘ ಗೌರವಿಸುತ್ತಲೇ ಬಂದಿದೆ. ಸಂಘಕ್ಕಿರುವುದು ದೇಶ ಮತ್ತು ದೇಶಪ್ರೇಮವಷ್ಟೇ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಆರ್ಎಸ್ಎಸ್ನ ಹಿಂದೂ ರಾಷ್ಟ್ರ ಕಲ್ಪನೆಯನ್ನೂ ಸಂಘದ ಕಟ್ಟಾಳು ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದಾರೆ. ನಮ್ಮದು ರಾಷ್ಟ್ರೀಯತೆಯ ಧರ್ಮ. ಹಿಂದೂಗಳಿಗೆ ಇರುವ ಸಮಾನ ಸ್ಥಾನಮಾನವೇ ಇತರ ಧರ್ಮದ ಅನುಯಾಯಿಗಳಿಗೆ ಇರಲಿದೆ. ಅವರ ಆರಾಧನಾ ಕೇಂದ್ರಗಳನ್ನು ಅವರು ಮಾಡಿಕೊಳ್ಳಬಹುದು. ಯಾವುದೇ ಬೇಧ ಇಲ್ಲಿ ಇಲ್ಲ. ಈ ನೆಲದ ಗುಣ ಬಹುತ್ವ ಆಧಾರಿತವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಂಘಕ್ಕೂ ಬಿಜೆಪಿಗೂ ನೇರ ಸಂಬಂಧ ಇಲ್ಲ:
ಪ್ರಸ್ತುತ ಆರೆಸ್ಸೆಸ್ ಬಗ್ಗೆ ಟೀಕೆಗೆ ಮುಗಿ ಬೀಳುತ್ತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಬಿಜೆಪಿ ಸರ್ಕಾರಗಳನ್ನು ಆರೆಸ್ಸೆಸ್ನ ಕೈಗೊಂಬೆ ಎಂದು ಟೀಕಿಸುತ್ತಲೇ ಇವೆ. ಅಂತಹಾ ಅನುಮಾನಗಳನ್ನು ಕೂಡಾ ಬಗೆಹರಿಸುವ ಪ್ರಯತ್ನವನ್ನು ಸಿ.ಟಿ.ರವಿ ಈ ಸಂದರ್ಶನದಲ್ಲಿ ಮಾಡಿದ್ದಾರೆ. ಬಿಜೆಪಿಗೆ ಸಂಘದ ವಿಚಾರಗಳ ಪ್ರೇರಣೆಯಷ್ಟೇ ಹೊರತು ನೇರ ಸಂಬಂಧ ಇಲ್ಲ. ಬಿಜೆಪಿ ತನ್ನದೇ ಆದ ಸಂವಿಧಾನ, ಸಿದ್ದಾಂತವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಲವು ಸಂದರ್ಭದಲ್ಲಿ ಬಿಜೆಪಿ ಕೈಗೊಂಡಿದ್ದ ನಿಲುವನ್ನು ಸಂಘ ವಿರೋಧಿಸಿದೆ. ಅಂತಹಾ ಸಂದರ್ಭಗಳಲ್ಲೂ ಬಿಜೆಪಿಗೆ ಸಂಘವು ಸೂಚನೆಯನ್ನಾಗಲಿ ನೀಡಿಲ್ಲ. ನಿಯಂತ್ರಣವನ್ನಾಗಲಿ ಮಾಡುವುದಿಲ್ಲ. ಅಗತ್ಯ ಬಿದ್ದಾಗ, ಸಲಹೆ ಮಾರ್ಗದರ್ಶನವನ್ನು ಪಡೆಯುತ್ತೇವೆ ಎಂದವರು ಬಿಜೆಪಿ-ಆರೆಸ್ಸೆಸ್ನ ಆಂತರಿಕ ವಿಚಾರಗಳನ್ನು ಅನಾವರಣ ಮಾಡಿದ್ದಾರೆ.
ಮೂಲ ಬಿಜೆಪಿ ಹಾಗೂ ವಲಸಿಗರ ವಿಚಾರ ಕಮಲ ಪಾಳಯದಲ್ಲಿ ಆಗಾಗ ಮುನ್ನಲೆಗೆ ಬರುತ್ತಲೇ ಇವೆ. ಅದರಲ್ಲೂ ವಲಸಿಗ ನಾಯಕ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಕುರಿತಂತೆ ಬಿಜೆಪಿಯ ನಿಲುವನ್ನು ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ ಹಿಂದುತ್ವದ ಅಜೆಂಡಾದ ಪರವಾಗಿ ಇದ್ದಾರಾ ಎಂಬ ಅನುಮಾನಗಳಿಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿರುವ ರವಿ, ನಮ್ಮದು ಹಿಂದುತ್ವದ ಅಜೆಂಡಾ ಹಿಡನ್ ಅಲ್ಲ, ದೇಶ ಮೊದಲು ಎಂಬುವುದು ನಮ್ಮ ಅಜೆಂಡಾ. ಈ ನಂಬಿಕೆಯ ಮೇಲೆ ಬಸವರಾಜ್ ಬೊಮ್ಮಾಯಿಯವರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ನಮ್ಮಲ್ಲಿ 13 ವರ್ಷ ಸಂಸಾರ ಮಾಡಿದ ಮೇಲೆ ನಮಗೆ ಅನುಮಾನ ಏನಿದೆ? ಪಕ್ಷ ಅವರನ್ನು ಸಿಎಂ ಮಾಡಿದೆ ಹಾಗೂ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ ಎಂದಿದ್ದಾರೆ.
ನಮ್ಮ ವಿಚಾರವನ್ನು ಎತ್ತಿಹಿಡಿದು ಕೆಲಸ ಮಾಡಿದರೆ ನಮ್ಮ ಕಾರ್ಯಕರ್ತರು ಸಂತುಷ್ಟರಾಗುತ್ತಾರೆ ಎಂಬ ಸಂದೇಶವನ್ನು ಅವರು ಸಿಎಂ ಬೊಮ್ಮಾಯಿ ಅವರಿಗೆ ನೀಡಿದ್ದಾರೆ. ಇದೇ ವೇಳೆ, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿಯು ಚುನಾವಣೆ ಎದುರಿಸಲಿದೆಯೇ ಎಂಬ ರಾಜಕೀಯವಲಯದ ಜಿಜ್ಞಾಸೆ ಬಗ್ಗೆ ಸ್ಪಷ್ಟನೆಯನ್ನೂ ಅವರು ನೀಡಿದ್ದಾರೆ. ನಾವು ಸರ್ಕಾರದ ಕಾರ್ಯಯೋಜನೆಯನ್ನು ಮುಂದಿಟ್ಟುಕೊಂಡೇ ಮುಂಬರುವ ಚುನಾವಣೆಗೆ ಹೋಗುತ್ತೇವೆ ಎಂದಿದ್ದಾರೆ.