ಗದಗ : ಲಾಕ್‌ಡೌನ್ ಕಠಿಣ ನಿಯಮ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಪೊಲೀಸ್ ಕಾವಲು ಇದೆ. ಅದರಲ್ಲೂ ನಗರಗಳು ಖಾಕಿ ಭದ್ರಕೋಟೆಯಂತಿದೆ. ಈ ಪೊಲೀಸ್ ಸರ್ಪಗಾವಲು ಬೇಧಿಸಿ ಸಾಗಬೇಕಾದರೆ ಏನಾದರೊಂದು ಬಲವಾದ ಕಾರಣ ಹೇಳಲೇಬೇಕು. ಬಹುತೇಕ ಮಂದಿ ತಮ್ಮ ಸಂಬಂಧಿಕರಿಗೆ ಹುಷಾರಿಲ್ಲ ಎಂಬ ನೆಪ ಹೇಳಿದ್ದುಂಟು. ಊಟ-ತಿಂಡಿ-ಅಗತ್ಯ ವಸ್ತು ಖರೀದಿಯ ಉದ್ದೇಶವನ್ನೂ ಹೇಳಿಕೊಂಡಿದ್ದಿದೆ. ಔಷಧಿ ತರಲೆಂದು ಹೋಗುತ್ತಿರುವುದಾಗಿ ಅನೇಕರು ಸುಳ್ಳು ಹೇಳಿ ಸಿಕ್ಕಿಬಿದ್ದದ್ದೂ ಇದೆ. ಆದರೆ ಇಲ್ಲೊಬ್ಬ ವ್ಕಕ್ತಿ ಮನೆಯಿಂದ ಹೊರಬಂದಿದ್ದಕ್ಕೆ ಹೇಳಿದ ಕಾರಣ ಕೇಳಿದರೆ ನೀವೂ ನಿಬ್ಬರಗಾಗುತ್ತೀರಿ.
ಈತನ ಕೋಳಿಗೆ ಭೇದಿ ಉಂಟಾಗಿದೆಯಂತೆ. ಔಷಧಿ ತರಲೆಂದು ಈತ ಮನರ ಬಿಟ್ಟು ಹೊರಗೆ ಬಂದಿದ್ದಾನಂತೆ..
ಕೊರೊನಾ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಹಾಗಾಗಿ ಮನುಷ್ಯರ ಜೀವಕ್ಕೆ ತೊಂದರೆಯಾದರೂ ಹೊರಗೆ ಬಾರದ ಸ್ಥಿತಿಯಲ್ಲಿ ಜನರಿದ್ದಾರೆ. ಆದರೆ, ಗದಗ್‌ನ ಈ ವ್ಯಕ್ತಿ ತನ್ನ ಕೋಳಿಗೆ ಭೇದಿ ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿದ್ದ. ಗದಗ್‌ನ ಟಾಂಗಾಕೂಟ ವೃತ್ತದಲ್ಲಿ ನಗರದ ಸರಾಫ್ ಬಜಾರ್‌ನ ನಿವಾಸಿ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಕೋಳಿ ಜೊತೆ ಬೀದಿ ಸುತ್ತುತ್ತಿದ್ದ. ಮಾರ್ಗ ಮಧ್ಯೆ ಪೊಲೀಸರು ಯಡರದಾಗ ತನ್ನ ಕೋಳಿಯ ಆರೋಗ್ಯ ಸಮಸ್ಯೆ ಹೇಳಿಕೊಂಡಿದ್ದಾನೆ. ಬೆಳಿಗ್ಗೆಯಿಂದ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದುದಾಗಿ ಹೇಳಿದ್ದಾನೆ. ಈ ಕಾರಣ ಕೇಳಿ ಪೊಲೀಸರು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.
ಬಡಪಾಯಿಯಂತೆ ಕಾಣುತ್ತಿರುವ ಈತನ ಮಾತನ್ನು ನಂಬಬೇಕೇ ಬೇಡವೇ ಎಂಬುದು ಪೊಲೀಸರಿಗೆ ತಿಳಿಯುತ್ತಿರಲಿಲ್ಲ. ಈತ ಮುಗ್ದನೋ ಚಾಲಾಕಿಯೋ ಎಂಬ ನಿರ್ಧಾರಕ್ಕೆ ಬರಲೂ ಸಾಧ್ಯವಾಗುತ್ತಿರಲಿಲ್ಲ. ಅದಾಗಿಯೂ ಹಲವಾರು ಪ್ರಶ್ನೆಗಳನ್ನು ಕೇಳಿದಾಗ ಈತನಿಂದ ಉದುರುತ್ತಿದ್ದ ಉತ್ತರವೆಲ್ಲವೂ ಕಾಮಿಡಿ ಎನಿಸುತ್ತು. ಲಾಕ್ ಡೌನ್ ನ ಟೆನ್ಶನ್ ನಲ್ಲಿದ್ದ ಪೊಲೀಸರಿಗೆ ಮನರಂಜನೆ ಸಿಕ್ಕಂತಾಗಿದೆ.
ಈ ಕೋಳಿ ಸದಾಕಾಲ ಇತನೊಂದಿಗೇ ಇರುತ್ತಿತ್ತಂತೆ. ಕುಂತರೂ, ನಿಂತರೂ ಇದು ತನ್ನನ್ನು ಬಿಟ್ಟು ಅಗಲುತ್ತಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಎದ್ದ ಕೂಡಲೇ ಇದಕ್ಕೆ ಎರಡು ಬಾರಿ ಬೇಧಿ ಆಗಿದೆಯಂತೆ. ಹೀಗಾಗಿ ಟೆನ್ಶನ್ ಆಗಿ, ಪಶು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಕೋಳಿಯ ಈ ಮಾಲೀಕ.