ಉಡುಪಿ: ಬರಗಾಲ ಸಂದರ್ಭದಲ್ಲಿ ಸಾಧು-ಸಂತರು ಪವಾಡ ಮೂಲಕ ಜೀವ ಜಲ ಹರಿಸಿದ ಪ್ರಸಂಗಗಳನ್ನು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಆದರೆ ಸಂತನಲ್ಲದ ಕಾಯಕಯೋಗಿ ಉಡುಪಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾದ ಊರುಗಳಿಗೆ ಜೀವಜಲ ಹರಿಸಿ ಆಧುನಿಕ ಭಗೀರಥ ಎನಿಸಿ ದೇಶವ್ಯಾಪಿ ಸುದ್ದಿಯಾದವರು. ಅನಾರೋಗ್ಯ ಪೀಡಿತರಿಗೆ ಸಂಕಷ್ಟ ಕಾಲದಲ್ಲಿ ಆಪತ್ಪಾಂಧವರಾಗಿ ಸಾಧುಗಳು ನೆರವಾಗಿ ನಿಂತು ಗುಣಪಡಿಸಿದ ಸನ್ನಿವೇಶಗಳೂ ಪುರಾಣ ಪ್ರಸಂಗಗಳಿಂದ ತಿಳಿದಿದ್ದೇವೆ. ಆ ಕಥೆಗಳನ್ನೂ ಮೀರಿಸುವ ಶೇಷ್ಠತೆಗೆ ಇದೇ ಡಾ.ಗೋವಿಂದ ಬಾಬು ಪೂಜಾರಿ ಪಾತ್ರರಾಗಿದ್ದಾರೆ.
ಹಲವಾರು ಮಂದಿಯ ಕಾಯಿಲೆಗಳಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿರುವ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರೂ ಆಗಿರುವ ಗೋವಿಂದ ಬಾಬು ಪೂಜಾರಿಯವರು, ಕಿವಿ ಕೇಳದೆ ಮಾತು ಬಾರದೇ ಕಂಗಾಲಾಗಿದ್ದ ಉಪ್ಪುಂದ ತಾರಪತಿಯ ಬಡ ಕುಟುಂಬದ ಮಗು ಅನ್ವಿತಾಳಿಗೆ ಚಿಕಿತ್ಸೆ ಕೊಡಿಸಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಈ ಬಾಲಕಿಯ ಕಿವಿಗೆ ತಾಂತ್ರಿಕ ಉಪಕರಣ ತೊಡಗಿಸಿ ಅಲ್ಪ ಪ್ರಮಾಣದ ಮಾತಾಡುವಂತೆ ಮತ್ತು ಕೇಳುವಂತೆ ಚಿಕಿತ್ಸೆ ಕೊಡಿಸಿ ಹೆತ್ತವರ ಕಣ್ಣೀರೊರಿಸಿದ ದೇವಪುರಷ ಡಾ.ಗೋವಿಂದ ಬಾಬು ಪೂಜಾರಿ ಅವರು ಕರಾವಳಿಯ ಬಡಜನರ ಪಾಲಿಗೆ ಆಶಾಕಿರಣ ಎಂಬಂತಾಗಿದ್ದಾರೆ.
ಯಾರು ಈ ಪೂಜಾರಿ..?
ಕರಾವಳಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಬಡ ಕುಟುಂಬದಿಂದ ಬಂದವರು. ಹರೆಯಕ್ಕೆ ಬಂದಾಗ ಉದ್ಯೋಗಕ್ಕಾಗಿ ಪರದಾಡಿದ್ದ ಅವರು ಹೊಟೇಲ್ ಉದ್ದಿಮೆಯಲ್ಲಿ ನೌಕರನಾಗಿ ದುಡಿದಿದ್ದಾರೆ. ತಮ್ಮ ಶ್ರಮದಿಂದಲೇ ಆಹಾರೋದ್ದಿಮೆ ಸಂಸ್ಥೆ ಕಟ್ಟಿ ಸಾವಿರಾರು ಮಂದಿಗೆ ಉದ್ಯೋಗ ಕೊಡುತ್ತಿದ್ದಾರೆ. ಪ್ರತಿಷ್ಠಿತ ChefTalk ಕಂಪನಿಯ ಮಾಲೀಕರಾಗಿರುವ ಇವರು, ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ದುಡಿಯುವವರಿಗಾಗಿ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ. ಉದ್ಯೋಗ ಸೃಷ್ಟಿಗಾಗಿಯೇ ರೆಸಾರ್ಟ್ ಕಟ್ಟಿರುವ ಪೂಜಾರಿ, ಮೀನಿನ ಖಾದ್ಯ, ಮತ್ಸ್ಯ ಚಿಪ್ಸ್ ಸಹಿತ ಮೀನಿನಿಂದ ತಯಾರಿಸಿದ ತಿನಿಸುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಆ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ.
ಸ್ವಂತ ಉದ್ಯಮ ಸ್ಥಾಪಿಸುವವರಿಗಾಗಿ ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸಿರುವ ಇವರು, ಬೆಂಗಳೂರಿನಲ್ಲಿ ಆರಂಭಿಸಿರುವ ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಯುವ ಉದ್ಯೋಗಾಸಕ್ತರ ಪಾಲಿಗೆ ಆಪತ್ಪಾಂದವ ಅನ್ನಿಸಿದೆ. ಕೊರೋನಾ ಸಂಕಟಕಾಲದಲ್ಲಿ ಸಾವಿರಾರು ಕುಟುಂಬಗಳಿಗೆ ಅನ್ನ, ಆಹಾರ, ಹಣ, ವೈದ್ಯಕೀಯ ನೆರವು ನೀಡಿದ್ದ ಇವರು, ಕಡಲ ತೀರದಲ್ಲಿ ಚಂಡ ಮಾರುತದಿಂದ ನಿರಾಶ್ರಿತರದ ಹಲವಾರು ಕುಟುಂಬಗಳಿಗೆ ಸೂರು ಕಲ್ಪಿಸಿದವರು. ಹಲವಾರು ನಿರ್ಗತಿಕ ಕುಟುಂಬಗಳಿಗೆ ಮನೆಗಳನ್ನೇ ದಾನ ಮಾಡಿದ ಪುಣ್ಯ ಕಾರ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನೂ ನಾಚಿಸುವಂತಿದೆ.
ದೇಶ ಕಾಯುವ ಯೋಧರನ್ನು ರೂಪಿಸುವ ಉದ್ದೇಶದಿಂದ ಯುವಜನರಿಗೆ ತರಬೇತಿ ನೀಡುವ ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಲ್ಲೂ ಇವರು ಪ್ರಮುಖರು.
ಜನಪ್ರತಿನಿಧಿಯಲ್ಲದೇ ಇದ್ದರೂ ಜನಪ್ರತಿನಿಧಿಗಳ ಕೆಲಸಗಳನ್ನೂ ಮೀರಿ ಮಾಡಿದ ಜನಸೇವೆಯನ್ನು ಪರಿಗಣಿಸಿ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯವು ಗೋವಿಂದ ಬಾಬು ಪೂಜಾರಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ.