ಬೆಂಗಳೂರು: ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ 59,048 ಕೋಟಿ ರೂಪಾಯಿ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು ಇದು ಬಡ ವಿದ್ಯಾರ್ಥಿಗಳಿಗೆ ವರದಾನದಂತೆ ಕಾರ್ಯ ನಿರ್ವಹಿಸಲಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಎಸ್.ಸಿ.ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ..
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಈ ಕ್ರಮವು ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಅನುದಾನವು ಪ್ರತಿವರ್ಷ ಶೇ 5ರಷ್ಟು ಹೆಚ್ಚಳವಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಕೋಟಿಗೂ ಅಧಿಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದ್ದು, ಸಾಮಾಜಿಕ ಸಮಾನತೆಯ ಕನಸು ನನಸಾಗಲು ಮಹೋನ್ನತ ಕೊಡುಗೆ ನೀಡಲಿದೆ. 2020-21ರಲ್ಲಿ ಕರ್ನಾಟಕಕ್ಕೆ 179.3 ಕೋಟಿ, ಬಳಿಕ ಪ್ರತಿವರ್ಷ ಶೇ 5ರಷ್ಟು ಹೆಚ್ಚುತ್ತಾ ಹೋಗಿ 2025-26ರಲ್ಲಿ 314.79 ಕೋಟಿ ರಾಜ್ಯಕ್ಕೆ ಸಿಗಲಿದೆ. ಒಟ್ಟು 1,578 ಕೋಟಿ ರೂಪಾಯಿ ರಾಜ್ಯಕ್ಕೆ ಹರಿದುಬರಲಿದೆ. ರಾಜ್ಯ ಸರಕಾರವು ಇದಕ್ಕೆ ಪೂರಕವಾಗಿ ಶೇ 40ರಷ್ಟು ಅನುದಾನ ಕೊಡಲಿದೆ ಎಂದರು.
ಹಿಂದೆ ವಿದ್ಯಾರ್ಥಿಗಳು ಸರ್ಟಿಫಿಕೇಟ್ ಕೊಡಬೇಕಿತ್ತು. ಕಾಲೇಜಿನಲ್ಲಿ ಪ್ರವೇಶಾತಿ ವೇಳೆಯೇ ಬ್ಯಾಂಕ್ ಮತ್ತಿತರ ಮಾಹಿತಿಗಳ ಕ್ರೋಡೀಕರಣ ನಡೆಯಲಿದೆ. ಮಧ್ಯವರ್ತಿಗಳ ಸಮಸ್ಯೆ ಇಲ್ಲದೆ, ಯಾವುದೇ ತೊಡಕಿಲ್ಲದೆ ವಿದ್ಯಾರ್ಥಿವೇತನ ಲಭಿಸಲಿದೆ ಎಂದ ಅವರು, ಹಿಂದೆ ದಲಿತರು ಬಿಜೆಪಿಯಿಂದ ದೂರ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು. ಈಗ ದಲಿತರು ಸಂಪೂರ್ಣವಾಗಿ ಬಿಜೆಪಿ ಕಡೆ ಬಂದಿದ್ದಾರೆ. ಇದನ್ನು ಮಾನ್ಯ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ದಲಿತರು ದೂರ ಹೋದುದೇ ನನ್ನ ಸೋಲಿಗೆ ಮತ್ತು ಅಧಿಕಾರ ಕಳೆದುಕೊಳ್ಳಲು ಕಾರಣ ಎಂದು ಅವರು ತಿಳಿಸಿದ್ದಾರೆ ಎಂದರು.