ಚೆನ್ನೈ: ತಮಿಳುನಾಡಿನ ದೇವಾಲಯಗಳಲ್ಲಿ ಇನ್ನು ಮುಂದೆ ಮೊಬೈಲ್ ಫೋನ್ ಬಳಕೆ ಇಲ್ಲ. ಇಂಥದ್ದೊಂದು ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ಅಸ್ತು ಎಂದಿದೆ.
ತಮಿಳುನಾಡಿನಾದ್ಯಂತ ದೇಗುಲಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪೂಜಾ ಸ್ಥಳಗಳಲ್ಲಿ ಪಾವಿತ್ರ್ಯತೆಯನ್ನು ಕಾಪಾಡುವುದಕ್ಕೆ ಆದ್ಯತೆ ನೀಡಬೇಕೆಂಬುದು ಭಕ್ತರ ಆಶಯವಾಗಿರುತ್ತದೆ. ಈ ವಿಚಾರದಲ್ಲಿ ಧಾರ್ಮಿಕ ಪಂಡಿತರೇನೇಕರ ಅಭಿಪ್ರಾಯ ಕೂಡಾ ಇದೇ ರೀತಿಯದ್ದಾಗಿದೆ. ಇದೇ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ನೀಡಿರುವ ಅಭಿಪ್ರಾಯ ಕೂಡಾ ಧಾರ್ಮಿಕ ವಲಯದಲ್ಲಿ ಭಾರೀ ಮಹತ್ವ ಪಡೆದಿದೆ.
ಕರ್ನಾಟಕದಲ್ಲಿ ತೀರ್ಪು ಪ್ರತಿಧ್ವನಿಸಬಹುದೇ?
ಧಾರ್ಮಿಕ ಕೇಂದ್ರಗಳು ವೇದ ಪಠಣಗಳಿಂದಾಗಿ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ ಎಂಬುದು ಪಂಡಿತರ ಅಭಿಪ್ರಾಯ. ಮಂತ್ರ ಪಠಣ, ಘಂಟೆ ಜಾಗಟೆಗಳ ಸದ್ದಿನಿಂದ ದೇಗುಲಗಳು ಹಾಗೂ ಪೂಜಾ ಸ್ಥಳಗಳು ಅವುಗಳದ್ದೇ ಆದ ಧನಾತ್ಮಕ ತರಂಗಗಳನ್ನು ಹೊಂದಿರುತ್ತವೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿಯೇ ಪೂಜಾ ಸಂದರ್ಭಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಬಹುತೇಕ ಪುರೋಹಿತರು ಒಪ್ಪಿಕೊಳ್ಳುವುದಿಲ್ಲ. ಮೊಬೈಲ್ ಫೋನ್‌ಗಳ ಬಳಕೆಯಿದಾಗುವ ತರಂಗಗಳು ಪೂಜಾ ಸ್ಥಳಗಳಲ್ಲಿನ ಧನಾತ್ಮಕ ತರಂಗಗಳಿಗೆ ಧಕ್ಕೆ ತರುತ್ತವೆ ಎಂಬುದು ಈ ಪೌರೋಹಿತ್ಯ ಪ್ರಮುಖರ ಪ್ರತಿಪಾದನೆ. ಈ ಕಾರಣದಿಂದಲೇ ಕರ್ನಾಟಕದ ಬಹುತೇಕ ದೇವಾಲಯಗಳಲ್ಲಿ ಮೊಬೈಲ್ ಬಳಸದಂತೆ ಸೂಚಿಸಲಾಗುತ್ತಿದೆ. ಇದು ಕಾನೂನುಬದ್ದ ಸೂಚನೆ ಅಲ್ಲದಿದ್ದರೂ ದೇವಾಲಯದ ಪ್ರಮುಖರ ಸಲಹೆಯಾಗಿದ್ದು ಭಕ್ತಸಮೂಹ ಅದನ್ನು ಪಾಲಿಸುತ್ತಿದೆ.
ಇದೀಗ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶ ತಮಿಳುನಾಡಿನಲ್ಲಿ ಕಟ್ಟುನಿಟ್ಟಿನ ನಿಯಮಗಳಿಗೆ ಮುನ್ನುಡಿ ಬರೆದಿದೆ. ಈ ಬೆಳವಣಿಗೆ ತಮಿಳುನಾಡಿಗಷ್ಟೇ ಸೀಮಿತವಾಗಿರದೆ ಇತರ ರಾಜ್ಯಗಳ ದೇವಾಲಯಗಳಲ್ಲಿ ಆಚರಣೆಯಲ್ಲಿರುವ ಪದ್ದತಿಗಳಿಗೂ ಬಲತಂದುಕೊಟ್ಟಿದೆ.





















































