ಬೆಂಗಳೂರು: ರಾಜ್ಯರಾಜಕಾರಣದಲ್ಲಿ ತಳಮಳ ಸೃಷ್ಟಿಸಿರುವ ಸಿಡಿ ವಿವಾದ ಇದೀಗ ರೋಚಕ ಘಟ್ಟ ತಲಿಲುಪಿದೆ. ಈ ವರೆಗೂ ರಹಸ್ಯ ಸ್ಥಳದಲ್ಲಿದ್ದ ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದು, ಎಸ್‌ಐಟಿ ಅದಿಕಾರಿಗಳ ಮುಂದೆಯೂ ಹೇಳಿಕೆ ಕೊಟ್ಟಿದ್ದಾಳೆ. ಹಾಗಾಗಿ ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.
ಸಿಡಿ ವಿವಾದ ಬಯಲಾಗಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರ ಆಡಳಿತ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದವು. ಈ ನಡುವೆಯೂ ಸಂತ್ರಸ್ತೆ ತನ್ನ ಪರ ವಕೀಲರ ಸಹಾಯದಿಂದ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳಿಂದಲೂ ವಿಚಾರಣೆ
ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಾದ ಬಳಿಕ ಎಸ್ಐಟಿಯ ಕೋರಿಕೆಯಂತೆ ಯುವತಿಯನ್ನು ವಿಶೇಷ ತನಿಖಾ ದಳದ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಸಂಜೆ ವೇಳೆಗೆ ಯುವತಿಯನ್ನು ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್‌ಗೆ ಕರೆದೊಯ್ದು ಎಸ್‌ಐಟಿ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಂಗತಿಗಳನ್ನು ಕಳೆಹಾಕುವ ಅಗತ್ಯವಿರುವುದರಿಂದ ಬುಧವಾರ ಬೆಳಗ್ಗೆ 10 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ಎಸ್‌ಐಟಿ ಸೂಚಿಸಿದೆ.
ಈ ನಡುವೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆಯೇ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಿದ ಬೆಳವಣಿಗೆ ರಾಜ್ಯದಲ್ಲಿ ಅಪರೂಪದ ಬೆಳವಣಿಗೆ. ಇದರ ಜೊತೆಯಲ್ಲೇ ಸಂತ್ರಸ್ತೆಯ ಹೇಳಿಕೆ ಹಿನ್ನೆಲೆಯಲ್ಲಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿಯವರಿಗೆ ಬಂಧನ ಭೀತಿ ಎದುರಾಗಿದೆ.