ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡಿವೆ. ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆನೀಡಿವೆ.
ಶುಕ್ರವಾರದ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇದೇ ವೇಳೆ, ಸ್ಯಾಂಡಲ್‌ವುಡ್ ಕೂಡಾ ಬೆಂಬಲ ವ್ಯಕ್ತಪಡಿಸಿದೆ.
ಈ ಸಂಬಂಧ ಬೆಂಗಳೂರಿನಲ್ಲಿಂದು ಫಿಲಂ ಛೇಂಬರ್ ಪ್ರಮುಖರು ಸಭೆ ನಡೆಸಿ ಕರ್ನಾಟಕ ಬಂಧ್‌ನಲ್ಲಿ ಭಾಗಿಯಾಗುವ ಬಗ್ಗೆ ಚರ್ಚಿಸಿದರು. ಕನ್ನಡ ಚಿತ್ರೋದ್ಯಮದ ಅನೇಕ ಗಣ್ಯರು ಸಭೆಯಲ್ಲಿ ಭಾಗವಹಿಸಿ ಬಂದ್‌ಗೆ ಬೆಂಬಲ ಸೂಚಿಸಿದರು.
ಈ ಕುರಿತಂತೆ ಮಾಹಿತಿ ಹಂಚಿಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ. ಸುರೇಶ್ ಹಾಗೂ ಮಾಜಿ ಅಧ್ಯಕ್ಷ ಸಾರ.ಗೋವಿಂದ್, ಕರ್ನಾಟಕ ಬಂದ್ ದಿನದಂದು ಚಿತ್ರೋದ್ಯಮ ಬಂದ್ ಮಾಡಿ ಹೋರಾಟದಲ್ಲಿ ನಟ ನಟಿಯರು ಹಾಗೂ ತಂತ್ರಜ್ಞರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.