ಬೆಂಗಳೂರು: ರಾಜ್ಯದಲ್ಲಿ 5 ಕೋಟಿ ಮತದಾರರಿದ್ದು, ಪ್ರತಿಯೊಬ್ಬರಿಗೆ 6 ಸಾವಿರ ಎಂದರೆ ಸುಮಾರು 30 ಸಾವಿರ ಕೋಟಿ ಹಣ ಹಂಚಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ದೂರಿದ್ದಾರೆ.
ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಮುಖ್ಯಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಉಗ್ರಪ್ಪ, ಈ ದೂರಿನಲ್ಲಿ ಜ.22ರಂದು ಬಿಜೆಪಿ ಮಾಜಿ ಸಚಿವರು, ಹಾಲಿ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಮುಂದಿನ ಚುನಾವಣೆಯಲ್ಲಿ ಪ್ರತಿ ಮತದಾರರಿಗೆ 6 ಸಾವಿರ ಹಣ ನೀಡುತ್ತೇವೆ ಎಂದು ಹೇಳಿದ್ದರು. ರಾಜ್ಯದಲ್ಲಿ 5 ಕೋಟಿ ಮತದಾರರಿದ್ದು, ಪ್ರತಿಯೊಬ್ಬರಿಗೆ 6 ಸಾವಿರ ಎಂದರೆ ಸುಮಾರು 30 ಸಾವಿರ ಕೋಟಿ ಹಣ ಹಂಚಲು ಬಿಜೆಪಿ ಮುಂದಾಗಿದೆ ಎಂಬ ಸಂಗತಿಯನ್ನು ಉಲ್ಲೇಖಿಸಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಈ ವಿಚಾರವಾಗಿ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದೇವೆ. ಈ ವಿಚಾರವಾಗಿ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಧಿಕಾರಿಗಳು ಈ ವಿಚಾರವಾಗಿ ಕಾನೂನು ಸಲಹೆ ಪಡೆಯುತ್ತೇವೆ. ಇದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಚಾರ ಎಂದು ಹೇಳಿರುವ ಹಿನ್ನೆಲೆಯಲ್ಲಿ ನಾವು ಇಂದು ಆಗಮಿಸಿ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ಇದರ ಜತೆಗೆ ಐದು ಆಗ್ರಹಗಳನ್ನು ಮುಂದಿಟ್ಟಿದ್ದೇವೆ ಎಂದು ಅವರು ತಿಳಿಸಿದರು.
ಈ ವಿಚಾರವಾಗಿ ಸುದೀರ್ಘ ತನಿಖೆ ನಡೆಸಬೇಕು.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದ ರಮೇಶ್ ಜಾರಕಿಹೋಳಿ, ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಜೆಪಿ ನಡ್ಡಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಆಯೋಗ ಸೂಚಿಸಬೇಕು ಎಂದು ಆಗ್ರಹಿಸಿದ ಅವರು, ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂವಿಧಾನದ ಆಶಯದಂತೆ ನಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು, ಐಪಿಎಸ್ ಸೆಕ್ಷನ್ ಹಾಗೂ ಜನಪ್ರತಿನಿಧಿ ಕಾಯ್ದೆಗಳ ಉಲ್ಲಂಘನೆ ಮಾಡಿದ್ದು ಇದನ್ನು ವಿಶೇಷವಾದ ಪ್ರಕರಣ ಎಂದು ಪರಿಗಣಿಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ನಡ್ಡಾ ಹಾಗೂ ಕಟೀಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
30 ಸಾವಿರ ಕೋಟಿ ವಿಲ್ ಘಾಟ್ ಮನೆ ವಿಚಾರವಾಗಿ ಆದಾಯ ತೆರಿಗೆ ಹಾಗೂ ಇಡಿ ಸಂಸ್ಥೆಗಳಿಗೆ ತನಿಖೆಗೆ ಸೂಚಿಸಬೇಕು.
ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂದು ತಿಳಿಸಿದ್ದೇವೆ. ನಮ್ಮ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು, ಅಲ್ಲಿಂದ ಬರುವ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ಸೋಲುವುದು ಬಿಜೆಪಿಯವರಿಗೆ ಸ್ಪಷ್ಟವಾಗಿದೆ. ಹೀಗಾಗಿ ಅಕ್ರಮದ ಮೂಲಕ ಮತದಾರರಿಗೆ ಆಮಿಷವೊಡ್ಡುವ ಪ್ರಯತ್ನ ಮಾಡುತ್ತಿದೆ. ಇದು ಸಂವಿಧಾನ, ಪ್ರಜಾಪಪ್ರಭುತ್ವ ಹಾಗೂ ಜನಾದೇಶಕ್ಕೆ ಬಗೆಯುವ ಅಪಚಾರ. ಹೀಗಾಗಿ ಇದರ ವಿರುದ್ದ ಕ್ರಮ ಜರುಗಿಸಬೇಕು ಎಂದು ಪಕ್ಷದ ವತಿಯಿಂದ ಆಗ್ರಹಿಸುತ್ತೇವೆ ಎಂದರು.