ಮಂಗಳೂರು : ಐತಿಹಾಸಿಕ, ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯ ವೈಭವೋಪೇತ ದೃಶ್ಯ ಸೊಬಗಿಗೆ ಸಾಕ್ಷಿಯಾಯಿತು. ಈ ಕೈಂಕರ್ಯ ಸನ್ನಿವೇಶ ಭಕ್ತ ಸಮೂಹದ ಪಾಲಿಗೆ ಸೊಗಸಾಗಿ ಕಂಡುಬಂತು.
ಆಗಾಗ್ಗೆ ವಿಶೇಷ ಉತ್ಸವಗಳಿಂದ ಆಸ್ತಿಕರ ಚಿತ್ತ ಸೆಳೆಯುವ ಕಾರ್ಸ್ಟ್ರೀಟ್ ವೆಂಕಟರಮಣ ದೇವಾಲಯದಲ್ಲಿ ಇಂದು ನಡೆದ ದೀಪೋತ್ಸವ ಅಭೂತಪೂರ್ವ ದೃಶ್ಯ ಧಾರೆಯಿಂದ ಕಂಗೊಳಿಸಿತು.

ಕಳೆದೆರಡು ವರ್ಷಗಳಲ್ಲಿ ಕೋವಿಡ್ ಸಂಕಷ್ಟ ಕಾಲದಲ್ಲಿ ಕರಾವಳಿಯ ಬಹುತೇಕ ದೇಗುಲಗಳ ಉತ್ಸವಗಳು ಸರಳ ಸಾಂಪ್ರದಾಯಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಈ ಬಾರಿ ಮಂಗಳೂರಿನ ಧಾರ್ಮಿಕ ಉತ್ಸವಗಳು ವೈಭವದಿಂದ ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತಿದ್ದವು ಕಾರ್ಸ್ಟ್ರೀಟ್ ದೇವಾಲಯಗಳು.
ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಮಹಮಯ ದೇವಸ್ಥಾನದ ದೇವರ ಕಾರ್ತಿಕ ದೀಪೋತ್ಸವ ಭಕ್ತ ಸಾಗರದ ನಡುವೆ ನೆರವೇರಿತು. ಸಾವಿರಾರು ಭಕ್ತರು ಸೋಮವಾರದ ಈ ಮಹಾವೈಭವದ ಸನ್ನಿವೇಶವನ್ನು ಕಣ್ತುಂಬಿಕೊಂಡರು. ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ಸೋ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.



















































