ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟ ನಾಳೆ ವಿಸ್ತರಣೆಯಾಗುವುದು ಖಚಿತ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ. ರಾಜ್ಯ ಸಚಿವ ಸಂಪುಟಕ್ಕೆ ನೂತನ ಸಚಿವರ ಸೇರ್ಪಡೆಗೆ ಮುಹೂರ್ತ ಸಿದ್ದವಾಗಿದ್ದು ಬುಧವಾರ ಸಂಜೆ ನಾಲ್ಕು ಗಂಟೆಗೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಸಿಎಂ ಕಚೇರಿ ಮೂಲಗಳು ಕೂಡಾ ಖಚಿತಪಡಿಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಸಂಜೆ ನಾಲ್ಕು ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ. ನೂತನ ಸಚಿವರ ಪಟ್ಟಿ ನಾಳೆ ಬಿಡುಗಡೆ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಆದರೆ ಯಾರೆಲ್ಲಾ ಸೇರ್ಪಡೆಯಾಗಲಿದ್ದಾರೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಈ ನಡುವೆ, ಏಳು ಮಂದಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ವರಿಷ್ಠರು ಒಪ್ಪಿಗೆ ಸೂಚಿಸಿದ್ದು, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಮುನಿರತ್ನ, ಆರ್. ಶಂಕರ್, ಎಂಟಿಬಿ ನಾಗರಾಜ್‌ಗೆ ಮಂತ್ರಿ ಸ್ಥಾನ ಖಚಿತ ಎನ್ನಲಾಗುತ್ತಿದೆ.
ಅರವಿಂದ ಲಿಂಬಾವಳಿ, ಸಿ.ಪಿ.ಯೋಗೀಶ್ವರ್, ಪ್ರೀತಮ್ ಗೌಡ, ಯತ್ನಾಳ್, ಉಮೇಶ್ ಕತ್ತಿ, ಹಾಲಪ್ಪ ಆಚಾರ್, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಸುನಿಲ್ ಕುಮಾರ್ ಹೆಸರುಗಳೂ ಮುಂಚೂಣಿಯಲ್ಲಿವೆ. ದತ್ತಾತ್ರೇಯ ಪಟೇಲ್ ರೇವೂರ, ಅಂಗಾರ, ರಾಮದಾಸ್, ರೂಪಾಲಿ ನಾಯಕ್, ಎಂ.ಪಿ.ಕುಮಾರಸ್ವಾಮಿ ಮೊದಲಾದವರ ಹೆಸರೂ ಕೇಳಿಬರುತ್ತಿವೆ. ಇವರಲ್ಲಿ ಯಾರು ಅದೃಷ್ಟವಂತರು ಎಂಬುದು ನಾಳೆಯಷ್ಟೇ ಗೊತ್ತಾಗಲಿದೆ.