(ಬರಹ: ಮಂಡ್ಯ ರಮೇಶ್)
ಅಧಿಕೃತವಾಗಿ ಮೈಸೂರಿನಲ್ಲಿ ನಾನು ನೆಲೆಗೊಂಡು ಇವತ್ತಿಗೆ ಮೂವತ್ತೆರಡು ವರ್ಷಗಳಾಯಿತು. ನಾಗಮಂಗಲ, ಮಂಡ್ಯ ,ಹೆಗ್ಗೋಡು, ದೆಹಲಿ ಭೂಪಾಲ್ ಅಂತಾ ದೇಶವೆಲ್ಲಾ ಅಂಡಲೆಯುತ್ತಿದ್ದ ನನಗೆ, ನೆಲೆ ಕಾಣಿಸಿದ್ದು ಗುರುಶ್ರೀ ಬಿ .ವಿ ಕಾರಂತರು.
ನೀನಾಸಂನಲ್ಲಿ ತಿರುಗಾಟದಲ್ಲಿದಾಗ ಇಡೀ ರಾಜ್ಯವೆಲ್ಲ ಸುತ್ತಾಡಿದ್ದು ದೊಡ್ಡ ಅನುಭವದಲ್ಲಿ ಮಿಂದುಕೊಂಡಿದ್ದವ ನಾನು. ಆನಂತರ ರಂಗಾಯಣಕ್ಕೆ ಆಯ್ಕೆಯಾಗಿ ಅಲ್ಲಿಂದಾಚೆಗೆ ಹೊಸ ಮಜಲು ಶುರುವಾಯಿತು.! ಅವತ್ತು ಕಾರಂತರು ಬಹಳ ಪ್ರೀತಿಯಿಂದ ಹೇಳಿದ ಮಾತು ಮೈದಡವಿ ಹಾರ್ಮೋನಿಯಂ ಮುಂದೆ ನಮ್ಮನ್ನೆಲ್ಲಾ ಕೂರಿಸಿ ‘ಸೋಲಿಸಬೇಡ ಗೆಲಿಸಯ್ಯ’ ಅಂತ ಹಾಡಿಸಿದರು. ಅದೊಂದು ರೋಮಾಂಚಕಾರಿ ಘಳಿಗೆ. ಅಲ್ಲಿ ನಾನು ಕಳೆದ ದಿನಗಳನ್ನು ಯಾವತ್ತಿಗೂ ಮರೆಯಲಾರೆ. ಹಾಗಾಗಿ ಸುತ್ತಮುತ್ತಲಿನ ಅನೇಕ ಅಪರಿಮಿತ ಪ್ರತಿಭಾವಂತರ ಸಮೀಪದಲ್ಲಿ ಒಡನಾಡುವ, ಅವರೊಡನೆ ಮಾತನಾಡುವ, ಅವರೊಡನೆ ಕಲಿಯುವ ಅಸಂಖ್ಯ ಘಳಿಗೆಗಳು ಸೃಷ್ಟಿಯಾಗಿದ್ದು ನನಗೆ ಅತ್ಯಂತ ಸಂತೋಷವನ್ನು ಕೊಟ್ಟಿದೆ.
ಮದುವೆಯ ನಂತರ ನಿಧಾನವಾಗಿ ಅಪಾರ್ಟ್ಮೆಂಟಲ್ಲಿ ಇದ್ದವನು ಪಡುವಾರಳ್ಳಿಯ ಪುಟ್ಟ ಮನೆಯಲ್ಲಿ ನಾನು ಸರೋಜ ಸಂಸಾರ ಶುರು ಮಾಡಿದೆವು. ಅಲ್ಲಿಂದ ಕುವೆಂಪು ನಗರಕ್ಕೆ ಬಂದೆ. ‘ನಟನ’ ಕನಸು ಗರಿಗೆದರಿತು. ಆ ಹೊತ್ತಿಗಾಗಲೇ ಒಂದು ರಂಗ ಗ್ರಾಮವನ್ನು ಮಾಡಬೇಕೆಂದು ಕಳಲವಾಡಿ ಗ್ರಾಮದಲ್ಲಿ ಜಾಗವನ್ನು ಕೊಂಡುಕೊಂಡಿದ್ದೆ. ಅದೊಂದು ದೊಡ್ಡ ಕನಸಾಗಿತ್ತು! ಆದರೆ ತಾಂತ್ರಿಕವಾಗಿ ಅದು ನನಗೆ ದಕ್ಕಲೇ ಇಲ್ಲ! ಬರೀ ಹಣ ಕಳೆದುಕೊಂಡಿದ್ದಷ್ಟೇ ಬಂತು. ನಂತರ ಮಕ್ಕಳಿಗೆ ರಂಗ ತರಬೇತಿ ಶಿಬಿರ ಮಾಡಿದೆ ಪುಟ್ಟ ಮನೆಯ ಮೇಲೆ ‘ಕಾರಂತ ರಂಗ ಮನೆ’ಯನ್ನು ಸೃಷ್ಟಿ ಮಾಡಿ ರಂಗ ಚಟುವಟಿಕೆಗಳನ್ನು ಆರಂಭಿಸಿದೆ.
ಮೈಸೂರಿನಲ್ಲಿ ನನ್ನ ನಟನದ ‘ರಜಾ ಮಜಾ’ ಮಕ್ಕಳಿಗೆ ಅತ್ಯಂತ ಪ್ರಿಯವಾದ ಜಾಗವಾಯಿತು. ನಿರಂತರವಾಗಿ ಶಾಲೆ ಮಾಡುವ ಸಂಕಲ್ಪ ಮಾಡಿದೆ. ಹಾಗೇ ಮುಂದುವರಿದು ಆ ಜಾಗ ಸಾಕಾಗುತ್ತಿಲ್ಲ ಅಂತನಿಸಿ ರಾಮಕೃಷ್ಣನಗರದ ಈಗಿರುವ ಜಾಗದಲ್ಲಿ ಪುಟ್ಟದೊ೦ದು ಕುಟೀರವನು ಕಟ್ಟಿ ಅಲ್ಲಿ ಚಟುವಟಿಕೆಗಳನ್ನು ಆರಂಭಿಸಿದೆ.. ಮಳೆ, ಗಾಳಿ, ಹಿತೈಷಿಗಳ ಮಾತಿನ ಆಕ್ರಮಣಕೆ ಅದು ನಲುಗಿ ಹೋಯಿತು. ಆದರೂ ಛಲ ಬಿಡದ ತಿವಿಕ್ರಮನಂತೆ ಕೆಲಸ ಮಾಡುತ್ತಲೇ ಹೋದೆ. ಮೈಸೂರಿನ ಅನೇಕ ಜನರು ಪ್ರೀತಿ ಗೆಳೆಯರು ಮತ್ತು ನನಗೆ ನೆರವಾದವರು ಅಸಂಖ್ಯರು. ಈ ಎಲ್ಲಾ ಸ್ಥಳೀಯ ವಿಶ್ವಾಸಿಗಳನ್ನು ಮತ್ತೆ ಕ್ರೋಡೀಕರಿಸಿಕೊಂಡು ರಂಗಭೂಮಿಯನ್ನು ನಿಜವಾಗಿ ಪ್ರೀತಿಸುವ ಅನೇಕ ರಂಗ ಗೆಳೆಯರನ್ನು ಸಹಕಾರದೊಂದಿಗೆ ಮತ್ತೆ ರಂಗಮಂದಿರವನ್ನು ಕಟ್ಟಲು ಶುರು ಮಾಡಿದೆ. ಇದರೊಡನೆ ನಾಗಮಂಗಲ ರಾಜ್ಯಾದ್ಯಂತ ನಡೆದ ರಂಗ ತರಬೇತಿ ಶಿಬಿರಗಳು ನನಗೆ ಮತ್ತಷ್ಟು ಹುಮ್ಮಸ್ಸನ್ನು ಕೊಟ್ಟವು. ರಂಗಭೂಮಿ, ಟಿವಿ,ಚಲನಚಿತ್ರ ಸಾಮಾಜಿಕ ಹೋರಾಟ.. ಅನೇಕ ಅನುಭವಗಳನ್ನು ಕ್ರೋಡೀಕರಿಸಿ ನಟನ ರಂಗಶಾಲೆ ನಿಧಾನವಾಗಿ ಕಣ್ತೆರೆಯಲು ಆರಂಭಿಸಿತು. ರಂಗ ತರಬೇತಿ ಮತ್ತು ಪ್ರದರ್ಶನಗಳೊಟ್ಟಿಗೆ ಸಾಗಿದವು. ಮಕ್ಕಳಶಾಲೆ, ರೆಪರ್ಟರಿ, ಯುವಕ ಯುವತಿಯರಿಗಾಗಿ ರಂಗತರಬೇತಿ ಶಿಬಿರಗಳು ಆ ನಂತರ 1ವರ್ಷದ ಡಿಪ್ಲೊಮಾ ಕೋರ್ಸ್ ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದುಕೊಂಡಿತು. ನಮ್ಮ ರೆಪರ್ಟರಿ ತಂಡವಂತೂ ರಾಜ್ಯಾದ್ಯಂತ ದೇಶಾದ್ಯಂತ ನೀಡಿದ ಪ್ರದರ್ಶನಗಳಿಗೆ ಬಹಳ ಉತ್ತಮ ಪ್ರತಿಕ್ರಿಯೆಗಳು ದೊರಕಿತು. ಸತತ ಇಪ್ಪತ್ತೈದು ವರ್ಷಗಳ ಕಾಲ ಸಿನಿಮಾ-ಟಿವಿಗಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೂ ಬೆಂಗಳೂರು ಮೈಸೂರು ಓಡಾಡಿ ,ಓಡಾಡಿ ನನ್ನ ಉತ್ಸಾಹ ಅಂತೂ ಕುಗ್ಗಲಿಲ್ಲ. ಈಗ ನಟನ ಮೈಸೂರಿನಲ್ಲಿ ಒಂದು ಸಾಂಸ್ಕೃತಿಕ ಹೆಗ್ಗುರುತಾಗಿದೆ. ಬೆಳೆದಿದೆ.
ನನ್ನ ಆತ್ಮ ವಿಶ್ವಾಸಕ್ಕಿಂತ ಜನರ ಪ್ರೀತಿ ಹೆಚ್ಚು
ನಟನ ಕಟ್ಟಿದಾಗ ಆದ ಅನೇಕ ತಾಪತ್ರಯಗಳು, ಅವಮಾನಗಳು, ಸಂಕಟಗಳು, ನೋವುಗಳು ಎಲ್ಲವನ್ನೂ ನುಂಗಿಕೊಂಡು ಇವತ್ತು ಮೈಸೂರಿನಲ್ಲಿ 3 ದಶಕಗಳಿಂದಾಚೆಗೆ ನಿರಂತರ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗಿದ್ದು: ಆತ್ಮ ವಿಶ್ವಾಸಕ್ಕಿಂತ ಹೆಚ್ಚು ಸಕಾರಾತ್ಮಕ ಧೋರಣೆಯುಳ್ಳ ಜನರು ಕೊಟ್ಟ ಪ್ರೀತಿ.! ಹಾಗಾಗಿ ಅವರೆಲ್ಲರಿಗೂ ಕೃತಜ್ಞನಾಗಿದ್ದೇನೆ.
ಮೈಸೂರಿಗೆ ನನ್ನ ಹೃದಯದ ನಮನ. ಮೈಸೂರಿನಂತಹ ಒಂದು ಅತ್ಯದ್ಭುತ ನೆಲೆಯಲ್ಲಿ ನನಗೆ ಸ್ಥಾನ ಕಲ್ಪಿಸಿಕೊಟ್ಟ ಗುರು ಬಿ.ವಿ.ಕಾರಂತರನ್ನು, ಪ್ರೀತಿಯ ರಂಗಾಯಣವನ್ನು, ಮತ್ತು ನನ್ನ ಜೊತೆ ಸಹಕರಿಸಿದ ಎಲ್ಲಾ ಬಂಧು ಮಿತ್ರ ಗೆಳೆಯರನ್ನು ಮತ್ತು ನಟನವನ್ನು ಅಪಾರವಾಗಿ ಪ್ರೀತಿಸಿದ ಪೋಷಕರನ್ನು ವಿದ್ಯಾರ್ಥಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೈಸೂರಿನ ಜನತೆಯನ್ನು ಹೃದಯಪೂರ್ವಕವಾಗಿ ನೆನೆಯುತ್ತೇನೆ.
ಅಪರಿಮಿತ ಪ್ರೀತಿ ತೋರಿ, ಕನ್ನಡಿಗರ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯಗಳು