ಬೆಂಗಳೂರು: ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ತೋಟಗಾರಿಕಾ ಮೇಳವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿದ ಸಿಎಂ ಬಿಎಸ್‌ವೈ, ಸಿಎಫ್‌ಟಿಆರ್ ಹಾಗೂ ಭಾರತೀಯ ತೋಟಗಾರಿಕಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್ ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಯವರು 100ನೇ ಕಿಸಾನ್ ರೈಲಿಗೆ ಇತ್ತೀಚೆಗಷ್ಟೇ ಚಾಲನೆ ನೀಡಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಕಿಸಾನ್ ರೈಲುಗಳ ಮೂಲಕ 27 ಸಾವಿರ ಟನ್ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗಿದೆ. ಶೀಘ್ರವಾಗಿ ಕೊಳೆತುಹೋಗಬಹುದಾದ ದಾಳಿಂಬೆ, ಕಿತ್ತಳೆ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಇತರ ರಾಜ್ಯಗಳಿಗೆ ಸಾಗಿಸಲು ಕೃಷಿ ರೈಲ್ ಯೋಜನೆಯ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಮಾತನಾಡಿ, ತೋಟಗಾರಿಕಾ ಪ್ರದೇಶ ವಿಸ್ತರಣೆಯಾಗುತ್ತಿರುವುದು ರೈತರಿಗೆ ತೋಟಗಾರಿಕೆ ಲಾಭದಾಯಕ ಎಂಬುದಕ್ಕೆ ನಿದರ್ಶನ. ವಿಜ್ಞಾನಿಗಳು ರೈತರಿಗೆ ಇನ್ನೂ ಹೆಚ್ಚು ಹೆಚ್ಚು ಲಾಭ ತರುವ ತಳಿಗಳನ್ನು ಸಂಶೋಧಿಸಿ, ರೈತರ ಬದುಕು ಹಸನುಗೊಳಿಸಬೇಕು ಎಂದು ಸಲಹೆ ನೀಡಿದರು.
ಈ ನಿಟ್ಟಿನಲ್ಲಿ ತೋಟಗಾರಿಕಾ ವಿವಿಯು ರೈತರಿಗೆ ಹಮ್ಮಿಕೊಳ್ಳುತ್ತಿರುವ ತರಬೇತಿ ಕಾರ್ಯಕ್ರಮಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.