ಬೆಂಗಳೂರು: ಬಿಎಂಎಸ್ ಮಹಿಳಾ ಸ್ವಾಯತ್ತ ಮಹಾ ವಿದ್ಯಾಲಯದ ಕಾಲೇಜು ವಾರ್ಷಿಕೋತ್ಸವ ‘ಸಂಭವ’ ಸಿಲಿಕಾನ್ ಸಿಟಿ ಜನರ ಗಮನಸೆಳೆಯಿತು. ಸ್ವಾತಂತ್ರ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲೇ ಈ ಕಾರ್ಯಕ್ರಮವೂ ನಡೆದಿದ್ದರಿಂದ ‘ಸಂಭವ’ ಮಹತ್ವ ಬಂತು.
ಆ.14ರಂದು ಬೆಳಿಗ್ಗೆ ಬಿಎಂಎಸ್ ತಾಂತ್ರಿಕ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಅನನ್ಯ ಸೊಬಗು ಕಂಡುಬಂತು.ಧರ್ಮದರ್ಶಿ ಡಾ. ಬಿ.ಎಸ್.ರಾಗಿಣಿ ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಬಿಎಂಎಸ್ ಮಹಿಳಾ ಸ್ವಾಯತ್ತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುಜಾತ ಡಿ,, ಮಿಸ್ಟರ್ ಕರ್ನಾಟಕ 2013 ಹಾಗೂ ಚಲನಚಿತ್ರ ನಟ ಸೂರಜ್ ಗೌಡ, ಚಲನಚಿತ್ರನಟಿ ಧನ್ಯ ರಾಮ್‌ಕುಮಾರ್, ಸರಿಗಮಪ ಖ್ಯಾತಿಯ ಗಾಯಕ ಕಂಬದ ರಂಗಯ್ಯ ಭಾಗಿಯಾಗಿದ್ದರು. ವಿದ್ಯಾರ್ಥಿನಿ ದಿವ್ಯಾ ಮತ್ತು ತಂಡದವರ ಹಾಡಿನೊಂದಿಗೆ ಹಾಗೂ ಗಣ್ಯರೆಲ್ಲರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧನ್ಯ ರಾಮ್‌ಕುಮಾರ್, ಮಾತನಾಡಿ, ಇದೇ ಮೊದಲ ಬಾರಿಗೆ ವೇದಿಕೆಯಲ್ಲಿ ಬಂದು ವಿದ್ಯಾರ್ಥಿಳೊಂದಿಗೆ ಬೆರೆತ ಬಗ್ಗೆ ಸಂತಸ ವ್ಯಕ್ತಪಡಿಸಿದರು. ತಮ್ಮ ಕಾಲೇಜಿನ ಕೆಲವು ನೆನಪುಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿಯರು ತಮ್ಮ ಗುರಿ ಸಾಧಿಸಲು ಒಂದು ದಿಟ್ಟ ದಾರಿಯನ್ನು ನಿರ್ಧರಿಸಬೇಕೆಂದರು. ಗಂಡು ಮತ್ತು ಹೆಣ್ಣು ಮಕ್ಕಳು ಸಮಾನರು ಮತ್ತು ಸ್ವಂತಕ್ಕಾಗಿ ಹೋರಾಡಬೇಕು ಎಂಬ ಡಾ. ಪುನೀತ್‌ರಾಜ್‌ಕುಮಾರ್ ಅವರ ಸಂದೇಶವನ್ನು ಪ್ರಸ್ತಾಪಿಸಿ, ಅದರಂತೆ ನಡೆಯುವಂತೆ ಸಲಹೆ ಮಾಡಿದರು. ತಮ್ಮ ಸಹೋದರ ಧೀರಜ್ ಕುಮಾರ್ ಅವರ ಚಿತ್ರ ‘ಶಿವ 143’ ಬಗ್ಗೆ ಮಾಹಿತಿ ಹಂಚಿಕೊಂಡರು.
ಸೂರಜ್ ಗೌಡ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಭಾರತವು ಮಹಿಳೆಯರ ಕೈಯಲ್ಲಿ ಸುರಕ್ಷಿತವಾಗಿದೆ ಮತ್ತು ಮುಂದಿನ ದಶಕಗಳಲ್ಲಿ ಮಹಿಳೆಯರು ಮಾತ್ರ ಜಗತ್ತನ್ನು ಆಳುತ್ತಾರೆ ಎಂದರು. ಕಂಬದ ರಂಗಯ್ಯ ರವರು, ಎಲ್ಲಾ ವಿದ್ಯಾರ್ಥಿನಿಯರಿಗೆ ತಮ್ಮ ಮೊಬೈಲ್‌ಗಳ ಫ್ಲ್ಯಾಷ್‌ಲೈಟ್ ಅನ್ನು ಸ್ವಿಚ್ ಆನ್ ಮಾಡುವಂತೆ ನಿರ್ದೇಷಿಸಿ, ಡಾ. ರಾಜ್‌ಕುಮಾರ್ ಹಾಗೂ ಡಾ. ಪುನೀತ್ ರಾಜ್‌ಕುಮಾರ್ ಅವರ ಕೆಲವು ಹಿಟ್ ಹಾಡುಗಳನ್ನು ಹಾಡಿ ರಂಜಿಸಿದರು.
ಶಾಸ್ತ್ರೀಯ, ಜಾನಪದ, ಪಾಶ್ಚಿಮಾತ್ಯ ನೃತ್ಯಗಳು, ರವಿ ವರ್ಮರವರ ಚಿತ್ರಕಲೆ ಆಧಾರಿತ ಫ್ಯಾಷನ್ ಶೋಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಸಂಭವ’ಕ್ಕೆ ಆಕರ್ಷಣೆ ತುಂಬಿತು. ಎನ್‌ಸಿಸಿ ವಿದ್ಯಾರ್ಥಿನಿಯರು ಭಾರತೀಯ ಸೇನೆಯ ಕುರಿತು ನೃತ್ಯ ಪ್ರದರ್ಶನ ನಡೆಸಿಕೊಟ್ಟರು ಇದೇ ವೇಳೆ, ಡಿಜೆ ವಿಸ್ಮಯ್ ಅವರ ಡಿಜೆ ಕಾರ್ಯಕ್ರವಮ ನೆರೆದಿದ್ದ ಜನರನ್ನು ರಂಜಿಸಿತು.
ವಾಣಿಜ್ಯ ವಿಭಾಗದ ರಚನಾ ಕೆ ಎಂ, ಕಾಲೇಜಿನ ಪರೀಕ್ಷಾ ರ್ಯಾಂಕ್ ಹೋಲ್ಡರ್ ಗಳನ್ನು ಪರಿಚಯಿಸಿದರು ಮತ್ತು ಮುಖ್ಯ ಅತಿಥಿಗಳು ಪ್ರಮಾಣ ಪತ್ರ ನೀಡಿದರು. ನಂತರ, ವಿದ್ಯಾರ್ಥಿನಿಯರೇ ಹಾಡಿನ ಸಂಯೋಜನೆ, ಹಾಡುಗಾರಿಕೆ ಮತ್ತು ವೀಡಿಯೊಗ್ರಫಿ ಸ್ವತಃ ಮಾಡಿರುವ ‘ಸಂಭವ ಥೀಮ್ ಸಾಂಗ್’ ಬಿಡುಗಡೆ ಮಾಡಲಾಯಿತು, ಇದು ಕಾಲೇಜಿನ ಮೆರುಗು ಹೆಚ್ಚಿಸಿತು. ಉಪ ಪ್ರಾಂಶುಪಾಲರು ಹಾಗೂ ಡೀನ್ ಆದ ಡಾ. ವಸುಂಧರಾ ಡಿ ಇ ಅವರು ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿನಿಯರಾದ ಆಲಿಯಾ ಅಮ್ರೀನ್ ಮತ್ತು ಹುಝೈಫಾ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಈ ನಡುವೆ, ‘ಸಂಭವ’ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾದ ವಿವಿಧ ಮಳಿಗೆಗಳು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿತ್ತು.


























































